ಮೈಸೂರು: ನಾಗರಹೊಳೆ ಹುಲಿ ಸಂರಕ್ಷಿತ ಪ್ರದೇಶದ ಹುಣಸೂರು ವನ್ಯಜೀವಿ ವಲಯದ ದೊಡ್ಡಹರವೆ ಮೀಸಲು ಅರಣ್ಯ ಪ್ರದೇಶದಲ್ಲಿ ಅಕ್ರಮವಾಗಿ ಕಡವೆ ಮತ್ತು ಜಿಂಕೆ ಮಾಂಸ ಮಾರಾಟ ಮಾಡಲು ಯತ್ನಿಸಿದ ಐವರು ಆರೋಪಿಗಳನ್ನು ಬಂಧಿಸಲಾಗಿದೆ. ಕಡವೆ ಮತ್ತು ಹೆಣ್ಣು ಮೂಷಿಕ ಜಿಂಕೆ (ಹೆಣ್ಣು ಕೂರೇ) ಬೇಟೆಯಾಡಿ ಶುಂಠಿ ಜಮೀನಿನ ಶೆಡ್ನಲ್ಲಿ ಮಾಂಸ ಮಾರಾಟ ಮಾಡಲು ಸಂಗ್ರಹಿಸಿಟ್ಟಿರುವ ಬಗ್ಗೆ ಖಚಿತ ಮಾಹಿತಿ ಪಡೆದ ಹುಣಸೂರು ವನ್ಯಜೀವಿ ವಲಯದ ಅಧಿಕಾರಿಗಳು ಹಾಗೂ ಸಿಬ್ಬಂದಿ ದಾಳಿ ನಡೆಸಿದ್ದಾರೆ.
ಈ ವೇಳೆ 5 ಮಂದಿ ಆರೋಪಿಗಳನ್ನು ಬಂಧಿಸಿದ್ದಾರೆ. ಇನ್ನೂ 7 ಜನ ತಲೆಮರೆಸಿಕೊಂಡಿದ್ದಾರೆ. ಬಂಧಿತರಿಂದ 5 ದ್ವಿಚಕ್ರ ವಾಹನ, 2 ಒಂಟಿ ನಳಿಕೆ ಬಂದೂಕು ಹಾಗೂ ಕಡವೆ ಹಾಗೂ ಹೆಣ್ಣು ಮೂಷಿಕ ಜಿಂಕೆಯ ಮಾಂಸವನ್ನು ವಶಪಡಿಸಿಕೊಳ್ಳಲಾಗಿದೆ.