ಮೈಸೂರು: ಕೊವೀಡ್-19 ಗುಣಲಕ್ಷಣಗಳು ಇರುವವರು ಉಚಿತವಾಗಿ ಟೆಸ್ಟ್ ಮಾಡಿಸಿಕೊಳ್ಳಿ. ಟೆಸ್ಟ್ ಮಾಡಿಸಿಕೊಂಡವರಿಗೆಲ್ಲ ಕ್ವಾರಂಟೈನ್ ಮಾಡುವುದಿಲ್ಲ. ಪಾಸಿಟಿವ್ ಬಂದವರನ್ನು ಮಾತ್ರ ಕ್ವಾರಂಟೈನ್ ಮಾಡಲಾಗುವುದು ಎಂದು ಜಿಲ್ಲಾಧಿಕಾರಿ ಅಭಿರಾಮ್ ಜಿ.ಶಂಕರ್ ಸ್ಪಷ್ಟಪಡಿಸಿದ್ದಾರೆ.
ಇಂದು ಚಾಮುಂಡಿ ಬೆಟ್ಟದಲ್ಲಿ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಬಳಿಕ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಸರ್ಕಾರದ ಸೂಚನೆಯಂತೆ ಜ್ವರ, ಕೆಮ್ಮು ಸೇರಿದಂತೆ ಕೊರೊನಾ ಗುಣಲಕ್ಷಣಗಳು ಇರುವ ಪ್ರತಿಯೊಬ್ಬರು ಗಂಟಲು ದ್ರವ ಪರೀಕ್ಷೆಯನ್ನು ಕಡ್ಡಾಯವಾಗಿ ಮಾಡಿಸಿಕೊಳ್ಳಬೇಕು. ಇದರ ಬಗ್ಗೆ ಭಯ ಪಡುವ ಅಗತ್ಯವಿಲ್ಲ. ಪಾಸಿಟಿವ್ ಬಂದವರನ್ನು ಮಾತ್ರ ಕೋವಿಡ್ ಆಸ್ಪತ್ರೆಯಲ್ಲಿ ಕ್ವಾರಂಟೈನ್ ಮಾಡಲಾಗುವುದು ಎಂದು ತಿಳಿಸಿದರು.
ಆಷಾಢ ಮಾಸದ ವಾರದಲ್ಲಿ 3 ದಿನ ಚಾಮುಂಡಿ ಬೆಟ್ಟಕ್ಕೆ ಸಾರ್ವಜನಿಕರಿಗೆ ನಿಷೇಧ:
ಆಷಾಢ ಮಾಸದ ನಾಲ್ಕು ಶುಕ್ರವಾರ, ಶನಿವಾರ ಮತ್ತು ಭಾನುವಾರ ಹಾಗೂ ಚಾಮುಂಡಿ ತಾಯಿಯ ಹುಟ್ಟಿದ ಹಬ್ಬ ಸೇರಿದಂತೆ ಈ ದಿನಗಳಲ್ಲಿ ಚಾಮುಂಡಿ ಬೆಟ್ಟಕ್ಕೆ ಸಾರ್ವಜನಿಕರಿಗೆ ಪ್ರವೇಶ ಇಲ್ಲ. ಇದರ ಜೊತೆಗೆ ಮೆಟ್ಟಿಲಿನ ಮೂಲಕವೂ ಚಾಮುಂಡಿ ಬೆಟ್ಟಕ್ಕೆ ಭಕ್ತರು ಹೋಗುವಂತಿಲ್ಲ. ಸಾರ್ವಜನಿಕರು ಇದಕ್ಕೆ ಸಹಕರಿಸಬೇಕೆಂದು ಅಭಿರಾಮ್ ಜಿ.ಶಂಕರ್ ಮನವಿ ಮಾಡಿದರು.