ಮೈಸೂರು : ಮೂಲಸೌಕರ್ಯ ಕೊರತೆ ಹಿನ್ನೆಲೆ ಚುನಾವಣೆ ಬಹಿಷ್ಕರಿಸಲು ಹುಣಸೂರು ತಾಲೂಕಿನ ಬೆಂಕಿಪುರ ಗ್ರಾಮಸ್ಥರು ಬಹಿಷ್ಕರಿಸಲು ನಿರ್ಧಾರಿಸಿದ್ದಾರೆ. ಹುಣಸೂರು ತಾಲೂಕಿನ ಚಲ್ಲಹಳ್ಳಿ ಗ್ರಾಪಂ ವ್ಯಾಪ್ತಿಗೆ ಸೇರಿದ ಬೆಂಕಿಪುರ ಗ್ರಾಮದಲ್ಲಿ 5 ಸಾವಿರ ಜನಸಂಖ್ಯೆ ಇದೆ. 5 ಜನ ಗ್ರಾಮ ಪಂಚಾಯತ್ ಸದಸ್ಯರಿದ್ದರೂ ಇಲ್ಲಿ ಮೂಲಸೌಕರ್ಯವಿಲ್ಲದೆ ಜನ ಸಮಸ್ಯೆ ಎದುರಿಸುತ್ತಿದ್ದಾರೆ.
ಸಮಸ್ಯೆ ಬಗೆಹರಿಸುವಂತೆ ಹಲವು ಬಾರಿ ಶಾಸಕರು, ಸಂಸದರು, ತಾಲೂಕು ಹಾಗೂ ಜಿಲ್ಲಾಡಳಿತಗಳ ಗಮನಕ್ಕೆ ತಂದರೂ ಯಾವುದೇ ಪ್ರಯೋಜನವಾಗಿಲ್ಲ. ಬಸ್‌ನ ವ್ಯವಸ್ಥೆಯಿಲ್ಲದೆ ಮಕ್ಕಳು ಶಾಲೆಗೆ ಹೋಗಲು ಕಷ್ಟಪಡುತ್ತಿದ್ದಾರೆ. ಸುಮಾರು 150 ಮಕ್ಕಳು ಶಾಲೆಗೆ ನಡೆದುಕೊಂಡು, ಇತರೆ ವಾಹನಗಳನ್ನು ಆಶ್ರಯಿಸಿಕೊಂಡು ಶಾಲೆಗೆ ಹೋಗುತ್ತಿದ್ದಾರೆ. ನಿತ್ಯ ಎರಡೂ ಕಿ.ಮೀ ನಡೆದುಕೊಂಡೆ ವಿದ್ಯಾರ್ಥಿಗಳು ಶಾಲೆಗೆ ಹೋಗಿ ಬರುತ್ತಾರೆ.
ಉದ್ಯೋಗಸ್ಥ ಯುವಕ, ಯುವತಿಯರು ದೂರದ ಮೈಸೂರಿಗೆ ಹೋಗಿ ಬರಲು ಬಹಳ ಕಷ್ಟಪಡುತ್ತಿದ್ದಾರೆ. ಹೆಣ್ಣುಮಕ್ಕಳು 10ನೇ ತರಗತಿ ತೇರ್ಗಡೆಯಾದ ನಂತರ ಮುಂದಿನ ವಿದ್ಯಾಭ್ಯಾಸಕ್ಕೆ ಬೇರೆ ಊರಿಗೆ ತೆರಳಲು ಬಸ್‌ನ ವ್ಯವಸ್ಥೆ ಇಲ್ಲದೆ ವಿದ್ಯಾಭ್ಯಾಸವನ್ನು ಮೊಟಕುಗೊಳಿಸುತ್ತಿದ್ದಾರೆ. ಗ್ರಾಮದಲ್ಲಿ ಸರ್ಕಾರಿ ಜಾಗವಿದ್ದರೂ ಅಧಿಕಾರಿಗಳು ಸ್ಮಶಾನಕ್ಕಾಗಿ ಜಾಗ ಗುರುತಿಸಿಲ್ಲ. ಗ್ರಾಮದಲ್ಲಿ ರಸ್ತೆ, ಚರಂಡಿ ವ್ಯವಸ್ಥೆ ಇಲ್ಲದಿರುವುದರ ಜೊತೆಗೆ ಕುಡಿಯುವ ನೀರಿನ ಸಮಸ್ಯೆಯೂ ಹೆಚ್ಚಿದೆ.
ಅದಕ್ಕೆ ಸರಿಯಾಗಿ ಚುನಾವಣೆ ಹತ್ತಿರ ಬಂದಾಗ ಮಾತ್ರ ಜನಪ್ರತಿನಿಧಿಗಳು ಈ ಗ್ರಾಮದತ್ತ ಮುಖ ಮಾಡುತ್ತಾರೆ. ಆದರೆ, ಅದೆಷ್ಟೋ ಬಾರಿ ಸಮಸ್ಯೆಗಳನ್ನು ಹೇಳಿಕೊಂಡರೂ ಅದನ್ನು ಆಲಿಸುವ ಸೌಜನ್ಯವಾಗಲಿ, ಸಮಸ್ಯೆಯನ್ನು ಪರಿಶೀಲಿಸಲು ಗ್ರಾಮದತ್ತ ಬಂದು ಹೋಗುವ ಮನಸ್ಸನ್ನಾಗಲಿ ಅವರು ಮಾಡುವುದಿಲ್ಲ. ಹಾಗಾಗಿ, ಜನಪ್ರತಿನಿಧಿಗಳ ವಿರುದ್ಧ ಸಿಡಿದೆದ್ದಿರುವ ಗ್ರಾಮಸ್ಥರು ಈ ಬಾರಿ ಚುನಾವಣೆಯನ್ನು ಬಹಿಷ್ಕರಿಸಲು ನಿರ್ಧರಿಸಿದ್ದಾರೆ.
ಇದನ್ನೂ ಓದಿ: ಬೆಂಗಳೂರು ವಿವಿಯಲ್ಲಿನ ಅನ್ಯಾಯ ಪ್ರಶ್ನಿಸಿ ಪ್ರತಿಭಟಿಸಿದವರ ವಿರುದ್ಧ ಕೇಸ್.. ವಿದ್ಯಾರ್ಥಿಗಳ ಮೇಲಿನ FIR ಹಿಂಪಡೆಯಲು ಒತ್ತಾಯ..