ಮೈಸೂರು: ದಸರಾ ಹಿನ್ನೆಲೆ ಗಜಪಡೆ ತಾಲೀಮಿನಲ್ಲಿ ಹೆಜ್ಜೆ ಹಾಕಲು ಸುಸ್ತಾಗುತ್ತಿದ್ದ ವರಲಕ್ಷ್ಮಿ ಆನೆಯನ್ನು ಕಾಡಿಗೆ ವಾಪಸ್ ಕಳುಹಿಸಲಾಗಿದೆ.
ಹೌದು, ಮತ್ತಿಗೋಡು ಆನೆ ಶಿಬಿರದಿಂದ ಕರೆತರಲಾಗಿರುವ ವರಲಕ್ಷ್ಮಿ ಆನೆಯು 10ನೇ ಬಾರಿ ದಸರಾದಲ್ಲಿ ಪಾಲ್ಗೊಳ್ಳಬೇಕಿತ್ತು. ಆದರೆ ಅದು ಗರ್ಭ ಧರಿಸಿರುವುದರಿಂದ ಬೆಳಗ್ಗೆ ಹಾಗೂ ಸಂಜೆ ತಾಲೀಮು ನಡೆಸಲು ಕರೆದೊಯ್ಯುವಾಗ ನಿಧಾನವಾಗಿ ಹೆಜ್ಜೆ ಹಾಕುತ್ತಿತ್ತು. ಇದರಿಂದ ಬೇರೆ ಆನೆಗಳಿಗೂ ತೊಂದರೆಯಾಗುತ್ತಿತ್ತು. ಹಾಗಾಗಿ ಇಂದು ವರಲಕ್ಷ್ಮಿ ಆನೆಯನ್ನು ಮತ್ತಿಗೋಡು ಶಿಬಿರಕ್ಕೆ ಕಳುಹಿಸಲಾಗಿದೆ. ಇದರ ಬದಲಿಗೆ ಗೋಪಾಲಕೃಷ್ಣ ಎಂಬ ಆನೆಯನ್ನು ಕರೆಸಲಾಗುತ್ತಿದೆ.
ಪಶು ವೈದ್ಯರ ವಿರುದ್ಧ ಅಸಮಾಧಾನ:
ಆನೆಗಳ ಆಯ್ಕೆ ಪ್ರಕ್ರಿಯೆ ಸಂದರ್ಭದಲ್ಲಿ ದಸರಾಕ್ಕೆ ಬರುವ ಆನೆಗಳ ಆರೋಗ್ಯ ಹಾಗೂ ಅವುಗಳ ಮಾನಸಿಕ ಸ್ಥಿತಿಗತಿಗಳ ಪರಿಶೀಲನೆ ನಡೆಸಲಾಗುತ್ತದೆ. ಆದರೆ ವರಲಕ್ಷ್ಮಿ ಗರ್ಭಿಣಿ ಅಂತ ಗೊತ್ತಿದ್ದರೂ ಯಾಕೆ ಅರಮನೆಗೆ ಕರೆತಂದರು ಎಂಬ ಪ್ರಶ್ನೆ ಸಾರ್ವಜನಿಕರದ್ದಾಗಿದೆ. ಈ ಬಾರಿ ಜಂಬೂಸವಾರಿ ಮೆರವಣಿಗೆ ಮುನ್ನವೇ ಮೂರು ಆನೆಗಳು ಹೊರಗುಳಿಯಲಿದ್ದು, ಇದು ಸಾರ್ವಜನಿಕರಲ್ಲಿ ಬೇಸರ ಮೂಡಿಸಿದೆ.