ಮೈಸೂರು: ಮಂಡ್ಯ ಲೋಕಸಭಾ ಕ್ಷೇತ್ರಕ್ಕೆ ಇಂದು ನಾಮಪತ್ರ ಸಲ್ಲಿಸಲಿರುವ ಪಕ್ಷೇತರ ಅಭ್ಯರ್ಥಿ ಸುಮಲತಾ ಅಂಬರೀಶ್ ನಾಡ ಅಧಿದೇವತೆ ಚಾಮುಂಡೇಶ್ವರಿ ದೇವಿಗೆ ಪೂಜೆ ಸಲ್ಲಿಸಿದರು.
ತಿರುಪತಿಯಿಂದ ಆಗಮಿಸಿದ ನಂತರ ಚಾಮುಂಡಿ ಬೆಟ್ಟಕ್ಕೆ ಪುತ್ರ ಅಭಿಷೇಕ್ ಹಾಗೂ ಅಂಬರೀಶ್ ಆಪ್ತ ರಾಕ್ಲೈನ್ ವೆಂಕಟೇಶ್ ಅವರೊಂದಿಗೆ ಆಗಮಿಸಿದ ಸುಮಲತಾ ಅಂಬರೀಶ್, ಮೊದಲಿಗೆ ಗಣಪತಿಗೆ ಪೂಜೆ ಸಲ್ಲಿಸಿ ಬಳಿಕ ಚಾಮುಂಡೇಶ್ವರಿ ಗರ್ಭಗುಡಿಯಲ್ಲಿ ನಾಮಪತ್ರವನ್ನಿಟ್ಟು ಪೂಜೆ ಸಲ್ಲಿಸಿದರು.
ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಅಂಬರೀಶ್ ಚುನಾವಣೆಗೆ ನಿಂತಾಗ ನಾನಿದ್ದೆ. ನಾನು ಚುನಾವಣೆಗೆ ಸ್ಪರ್ಧಿಸುತ್ತಿರುವಾಗ ನನ್ನ ಹಿಂದೆ ಅವರ ಶಕ್ತಿ ಇದೆ.ನಿಜವಾದ ಸ್ಪರ್ಧೆ ಈಗ ಶುರುವಾಗಿದೆ. ನನಗೆ ಯಾವುದೇ ಒತ್ತಡವಿಲ್ಲ. ನನ್ನ ಜನರಿಗಾಗಿ ಎಂತಹ ತೊಂದರೆಯನ್ನು ತೆಗೆದುಕೊಳ್ಳಲು ನಾನು ಸಿದ್ಧ.ಈ ಹೋರಾಟದಲ್ಲಿ ಗೆಲ್ಲುವ ವಿಶ್ವಾಸ ನನ್ನಲ್ಲಿ ಇದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.