ಮೈಸೂರು: ಜಿಲ್ಲೆಯಲ್ಲಿ ಕಳೆದ ಎರಡು ವಾರಗಳಿಂದ ಕೊರೊನಾ ಸೋಂಕಿತರ ಸಂಖ್ಯೆ ಇಳಿಮುಖವಾಗುತ್ತಿದ್ದು, ಈ ಹಿನ್ನೆಲೆಯಲ್ಲಿ ಮೂರು ಕೋವಿಡ್ ಕೇರ್ ಸೆಂಟರ್ಗಳನ್ನು ಜಿಲ್ಲಾಡಳಿತದ ಸೂಚನೆ ಮೇರೆಗೆ ಸ್ಥಗಿತಗೊಳಿಸಲಾಗಿದೆ.
ಮೇ ತಿಂಗಳಲ್ಲಿ ಮೈಸೂರಿನಲ್ಲಿ ಎರಡನೇ ಹಂತದ ಕೊರೊನಾ ಹೆಚ್ಚಾಗಿ ವರದಿಯಾಗಿತ್ತು. ದಿನಕ್ಕೆ ಕನಿಷ್ಠ ಅಂದರು 300 ರಿಂದ ಗರಿಷ್ಠ 1500 ವರೆಗೂ ಪಾಸಿಟಿವ್ ಪ್ರಕರಣಗಳು ವರದಿಯಾಗುತ್ತಿದ್ದವು. ಈ ಹಿನ್ನೆಲೆಯಲ್ಲಿ ಜಿಲ್ಲಾಸ್ಪತ್ರೆಯನ್ನು ಹೊರತು ಪಡಿಸಿ ನಗರದ ಕೆಲವು ಕಡೆಗಳಲ್ಲಿ ಕೋವಿಡ್ ಕೇರ್ ಸೆಂಟರ್ಗಳನ್ನು ತೆರೆಯಲಾಗಿತ್ತು.
ಸೋಂಕಿತರನ್ನು ಮೂರು ವರ್ಗವಾಗಿ ವಿಂಗಡಿಸಿ ಪ್ರತ್ಯೇಕ ಆಸ್ಪತ್ರೆಗಳಿಗೆ ದಾಖಲಿಸಿ ಚಿಕಿತ್ಸೆ ನೀಡುತ್ತಿದ್ದರು. ಉಸಿರಾಟದ ತೊಂದರೆ ಇದ್ದವರಿಗೆ ಕೋವಿಡ್ ಆಸ್ಪತ್ರೆಗೆ, ವೈದ್ಯಕೀಯ ಸೇವೆ ಅಗತ್ಯ ಇರುವವರಿಗೆ ಕೋವಿಡ್ ಹೆಲ್ತ್ ಕೇರ್ ಸೆಂಟರ್ ಹಾಗೂ ಸೋಂಕು ಗುಣಲಕ್ಷಣ ರಹಿತರಿಗೆ ಕೋವಿಡ್ ಕೇರ್ ಸೆಂಟರ್ಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿತ್ತು.
ಅನಗತ್ಯ ವೆಚ್ಚ ತಪ್ಪಿಸಲು 3 ಕೋವಿಡ್ ಕೇರ್ ಸೆಂಟರ್ ಸ್ಥಗಿತ
ಸದ್ಯಕ್ಕೆ ಜಿಲ್ಲೆಯಲ್ಲಿ ಕೊರೊನಾ ಸೋಂಕಿತ ಪ್ರಕರಣಗಳ ಸಂಖ್ಯೆ ಇಳಿಮುಖವಾಗುತ್ತಿದೆ. ಮಂಡಕಳ್ಳಿ ಬಳಿ ಇರುವ ಕೆ.ಎಸ್.ಒ ಕಟ್ಟಡ, ಭಾರತೀಯ ಡಿ.ಇಡಿ ಟ್ರೈನಿಂಗ್ ಸ್ಕೂಲ್ ಹಾಗೂ ಅಂಡಾಳಾಸ್ ಇಂಗ್ಲಿಷ್ ಮೀಡಿಯಂ ಸ್ಕೂಲ್ನಲ್ಲಿ ಆರಂಭಿಸಿದ್ದ ಕೋವಿಡ್ ಕೇರ್ ಸೆಂಟರ್ ಸದ್ಯ ಸ್ಥಗಿತಗೊಂಡಿವೆ. ಪ್ರಸ್ತುತ ಕೋವಿಡ್ ಆಸ್ಪತ್ರೆ, ಕೆ.ಆರ್.ಆಸ್ಪತ್ರೆ, ಟ್ರಾಮಾ ಕೇರ್ ಸೆಂಟರ್, ಇಎಸ್ಐ ಆಸ್ಪತ್ರೆ, ಕೊರೊನಾ ವಾರಿಯರ್ಸ್ಗೆ ವಿಕ್ರಮ ಆಸ್ಪತ್ರೆ ಹಾಗೂ ಸೋಂಕಿತರಿಗೆ ಬಿ.ಎಂ ಆಸ್ಪತ್ರೆಯನ್ನು ಕಾಯ್ದಿರಿಸಲಾಗಿದೆ.
ಜಿಲ್ಲೆಯಲ್ಲಿ ಕೋವಿಡ್ ಸೋಂಕಿತರ ಸಂಖ್ಯೆ ಇಳಿಮುಖ
ಜಿಲ್ಲೆಯಲ್ಲಿ ಪ್ರಸ್ತುತ 1374 ಸಕ್ರಿಯ ಪ್ರಕರಣಗಳು ಇವೆ. 152 ಸೋಂಕಿತರು ಸರ್ಕಾರಿ ಆಸ್ಪತ್ರೆಯಲ್ಲಿ, 375 ರೋಗಿಗಳು ಖಾಸಗಿ ಆಸ್ಪತ್ರೆಗಳ ನಿಗಾ ಘಟಕಗಳಲ್ಲಿ, 59 ಮಂದಿ ಸರ್ಕಾರಿ ಕೋವಿಡ್ ಹೆಲ್ತ್ ಕೇರ್ ಸೆಂಟರ್ ನಲ್ಲಿ, 91 ಜನ ಸೋಂಕಿತರು ಖಾಸಗಿ ಕೋವಿಡ್ ಹೆಲ್ತ್ ಕೇರ್ ಸಂಸ್ಥೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. 59 ಮಂದಿ ಮಾತ್ರ ಸರ್ಕಾರಿ ಕೋವಿಡ್ ಕೇರ್ ಸೆಂಟರ್ನಲ್ಲಿ ಮತ್ತು 25 ಮಂದಿ ಖಾಸಗಿ ಕೋವಿಡ್ ಕೇರ್ ಸೆಂಟರ್ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಒಟ್ಟಾರೆ ಜಿಲ್ಲೆಯಲ್ಲಿ ಕೊರೊನಾ ಸೋಂಕಿತ ಪ್ರಕರಣಗಳು ಇಳಿಮುಖವಾಗುತ್ತಿದೆ. ಕೋವಿಡ್ ಕೇರ್ ಸೆಂಟರ್ಗಳ ಅವಶ್ಯಕತೆ ಇಲ್ಲದಾಗಿದೆ. ಕೋವಿಡ್ ಜಿಲ್ಲಾಸ್ಪತ್ರೆ ಸೇರಿದಂತೆ ವಿವಿಧ ಆಸ್ಪತ್ರೆಗಳಲ್ಲಿ ಸೋಂಕಿತರಿಗೆ ಚಿಕಿತ್ಸೆ ನೀಡಲಾಗುತ್ತಿದ್ದು, ಕೊರೊನಾ ಮುಕ್ತ ಮೈಸೂರು ಕಡೆ ಹೆಜ್ಜೆ ಹಾಕುತ್ತಿದೆ.