ಮೈಸೂರು: ದಸರಾ ಪ್ರಮುಖ ಆಕರ್ಷಣ ಕೇಂದ್ರವಾದ ಜಂಬೂ ಸವಾರಿ ಮೆರವಣಿಗೆಗೆ ಇನ್ನು ಕೆಲವೇ ದಿನಗಳಿದ್ದು, 'ಲಕ್ಷ್ಮಿ' ತನ್ನ ಕಾಲ್ಗುಣ ತೋರಲು ಉತ್ಸುಕಳಾಗಿದ್ದಾಳೆ.
ಬಂಡೀಪುರ ರಾಷ್ಟ್ರೀಯ ಉದ್ಯಾನದ ರಾಂಪುರ ಆನೆ ಶಿಬಿರ ಆನೆಯಾಗಿರುವ ಈಕೆಗೆ 17 ವರ್ಷ. 2002ರಲ್ಲಿ ಆನೆಗಳಿಂದ ಬೇರ್ಪಟ್ಟು ದಿಕ್ಕು ಕಾಣದೇ ಕಣ್ಣೀರು ಹಾಕುತ್ತ ನಿಂತಿದ್ದ ಲಕ್ಷ್ಮಿಗೆ, ಅರಣ್ಯ ಇಲಾಖೆ ಆಶ್ರಯ ನೀಡಿದ ಫಲವಾಗಿ ದಸರಾದಲ್ಲಿ ಪಾಲ್ಗೊಳ್ಳುವ ಸುಯೋಗ ಒದಗಿ ಬಂದಿದೆ. ಹೆಸರಿನಂತೆ 'ಲಕ್ಷ್ಮಿ' ಕಳೆ ಇರುವ ಈ ಆನೆ ನೋಡಲು ಸುಂದರ ಹಾಗೂ ಸೌಮ್ಯ ಸ್ವಭಾವದ್ದಾಗಿದೆ. ಮಾವುತ ಹಾಗೂ ಕಾವಾಡಿಗಳು ಇಲ್ಲದೇ ಹೋದರೂ, ಹತ್ತಿರ ಬರುವ ಸಾರ್ವಜನಿಕರಿಗೆ ಕೀಟಲೆ ಮಾಡದೇ ತನ್ನ ಅಂದದ ಮೂಲಕ ಬರಮಾಡಿಕೊಂಡು ಮುದ್ದು ಮಾಡುತ್ತಾಳೆ ಈ ಲಕ್ಷ್ಮಿ.
ದಸರಾದಲ್ಲಿ ಇದೇ ಮೊದಲ ಬಾರಿಗೆ ಹೆಜ್ಜೆ ಹಾಕಲಿರುವ ಈಕೆ, ಎಲ್ಲರೊಂದಿಗೆ ಆತ್ಮೀಯತೆಯಿಂದ ನಡೆದುಕೊಳ್ಳುತ್ತಾಳೆ. ಹೊಸಬರ ಪಟ್ಟಿಯಲ್ಲಿರುವ ಈಶ್ವರ, ಜಯಪ್ರಕಾಶ್ ಜೊತೆ ಲಕ್ಷ್ಮಿ ಆನೆಯೂ ಒಂದಾಗಿದೆ. ದಸರಾ ಮೆರವಣಿಗೆಗೆ ಆನೆಗಳ ತರಬೇತಿ ಕುರಿತು ಈಟಿವಿ ಭಾರತ್ನೊಂದಿಗೆ ಮಾತನಾಡಿದ ಡಿಸಿಎಫ್ ಅಲೆಗ್ಸಾಂಡರ್ ಅವರು ಆನೆಗಳ ಬಗ್ಗೆ ವಿವರಣೆ ನೀಡಿದ್ದಾರೆ.