ಮೈಸೂರು: ಚಿನ್ನದ ಅಂಬಾರಿಯಲ್ಲಿ ನಾಡ ಅಧಿದೇವತೆ ಚಾಮುಂಡೇಶ್ವರಿ ತಾಯಿಗೆ ಪುಷ್ಪಾರ್ಚನೆ ಮಾಡುವ ಮೂಲಕ ಜಂಬೂಸವಾರಿ ಮೆರವಣಿಗೆಗೆ ಮುಖ್ಯಮಂತ್ರಿ ಬಿ ಎಸ್ಯಡಿಯೂರಪ್ಪ ಅವರು ಚಾಲನೆ ನೀಡಿದರು.
ಅರಮನೆ ಮುಂಭಾಗದ ಪುಷ್ಪಾರ್ಚನೆ ಮಂಟಪದಲ್ಲಿ ಮಹಾರಾಜ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಸೇರಿ ಅನೇಕ ಗಣ್ಯರು ಶ್ರೀಚಾಮುಂಡೇಶ್ವರಿಯನ್ನು ಹೊತ್ತು ಬಂದ ಅರ್ಜುನನಿಗೆ ಪುಷ್ಪಾರ್ಚನೆ ಮಾಡಿದರು. ಬಳಿಕ ಅಂಬಾರಿ ಹೊತ್ತ ಅರ್ಜುನ ಬನ್ನಿಮಂಟಪದ ಕಡೆ ರಾಜಗಾಂಭೀರ್ಯದಿಂದ ಹೆಜ್ಜೆ ಹಾಕಿದನು.
3ಬಾರಿ ಪುಷ್ಪಾರ್ಚನೆ ಮಾಡಿದ ಬಿಎಸ್ವೈ: ಜಂಬೂಸವಾರಿಗೆ ಯಡಿಯೂರಪ್ಪ 3 ಬಾರಿ ಪುಷ್ಪಾರ್ಚನೆ ಮಾಡಿದ್ದು ವಿಶೇಷವಾಗಿತ್ತು. ಅಲ್ಲದೆ ಕೋಟೆ ಆಂಜನೇಯ ದೇವಾಲಯದ ಮುಂಭಾಗದಲ್ಲಿ 2.13 ರಿಂದ 2:23ರವರೆಗೆ ಜರಗುವ ಮಕರ ಲಗ್ನದಲ್ಲಿ ನಂದಿಧ್ವಜಕ್ಕೆ ಪೂಜೆ ಸಲ್ಲಿಸಬೇಕಿತ್ತು. ಆದರೆ, 10 ನಿಮಿಷ ಮೊದಲೇ ಧ್ವಜಕ್ಕೆ ಪೂಜೆ ಸಲ್ಲಿಸಿದರು.
ಕಲಾತಂಡಗಳು ಹಾಗೂ ಸ್ತಬ್ಧಚಿತ್ರಗಳು ಹೊರಟ ನಂತರ 4.31 ರಿಂದ 4.57 ರವರೆಗೆ ಸಲ್ಲುವ ಶುಭ ಕುಂಭ ಲಗ್ನದಲ್ಲಿ ಚಿನ್ನದ ಅಂಬಾರಿಗೆ ಪುಷ್ಪಾರ್ಚನೆ ಮಾಡಬೇಕಾಗಿತ್ತು. ಆದರೆ, 4.17ಕ್ಕೇ ಸಿಎಂ ಪುಷ್ಪಾರ್ಚನೆ ಮಾಡಿದರು. ಚಿನ್ನದ ಅಂಬಾರಿ ಆನೆಯ ಬೆನ್ನಿನ ಮೇಲೆ ಬಲಭಾಗಕ್ಕೆವಾಲಿದ್ದು, ಅದನ್ನು ಅಲ್ಲಲ್ಲೇ ಸರಿ ಪಡಿಸಿಕೊಂಡು ಹೊರಡಲಾಗುತ್ತಿತ್ತು.