ಮೈಸೂರು: ನೈತಿಕತೆಯ ಬಗ್ಗೆ, ಭ್ರಷ್ಟಾಚಾರದ ಬಗ್ಗೆ ಮಾತನಾಡುವ ಸಿದ್ದರಾಮಯ್ಯಗೆ ತಮ್ಮ ಅಧಿಕಾರದ ಅವಧಿಯಲ್ಲಿ ಮಾಡಿದ ತಪ್ಪುಗಳು ನೆನಪಿಲ್ಲವೇ?. ಗಾಂಧಿ ವಿಚಾರ ಪರಿಷತ್ ಎಂಬ ಟ್ರಸ್ಟ್ಗೆ ಕೋಟ್ಯಂತರ ರೂಪಾಯಿ ಬೆಲೆಬಾಳುವ ನಿವೇಶನವನ್ನು ಮಂಜೂರು ಮಾಡಿರುವುದು ಮರೆತಿದ್ದಾರೆಯೇ? ಎಂದು ಬಿಜೆಪಿ ರಾಜ್ಯ ವಕ್ತಾರ ಎಂ.ಜಿ.ಮಹೇಶ್ ಪ್ರಶ್ನಿಸಿದ್ದಾರೆ.
ಈಟಿವಿ ಭಾರತ್‌ನೊಂದಿಗೆ ಮಾತನಾಡಿದ ಅವರು, ಸಿದ್ದರಾಮಯ್ಯ ಅವರು ಭ್ರಷ್ಟಾಚಾರದ ಬಗ್ಗೆ, ನೈತಿಕತೆಯ ಬಗ್ಗೆ ಹೇಳುತ್ತಾರೆ. ಆದರೆ ಅವರ ಅವಧಿಯಲ್ಲಿ ಮುಖ್ಯಮಂತ್ರಿಯಾಗಿದ್ದಾಗ ಗಾಂಧಿ ವಿಚಾರ ಪರಿಷತ್ ಎಂಬ ಟ್ರಸ್ಟ್ಗೆ ನಗರದ ಪ್ರತಿಷ್ಠಿತ ಬಡಾವಣೆಯಲ್ಲಿ ಸಿ.ಎ. ನಿವೇಶನ ಕೊಡಿಸಲು ಹುನ್ನಾರ ನಡೆಸಿದ್ದಾರೆ. ಆ ಟ್ರಸ್ಟ್ಗೆ ಗೌರವ ಅಧ್ಯಕ್ಷರು ಸಿದ್ದರಾಮಯ್ಯ ಅವರೇ. ಗೌರವ ಉಪಾಧ್ಯಕ್ಷರು ಎಚ್.ಸಿ.ಮಹಾದೇವಪ್ಪನವರು. ಈ ನಿವೇಶನಕ್ಕೆ ಸರ್ಕಾರ ನಿಗದಿ ಮಾಡುವ ಹಣವನ್ನು ಕರ್ನಾಟಕ ಸಂಸ್ಕೃತಿ ಇಲಾಖೆಯಿಂದ ಅನುದಾನದಿಂದ ನೀಡಿದ್ದಾರೆ. ಸಿದ್ದರಾಮಯ್ಯನವರಿಗೆ ನೈತಿಕತೆ ಇದೆಯಾ ಎಂದು ಮಹೇಶ್ ಕೇಳಿದರು.
ಗಾಂಧಿ ವಿಚಾರಧಾರೆಯನ್ನು ಪ್ರತಿಪಾದನೆ ಮಾಡುವ ಉದ್ದೇಶದಿಂದ ಟ್ರಸ್ಟ್ ಮಾಡುತ್ತೇವೆ ಎನ್ನುತ್ತಾರೆ. ಗಾಂಧಿಯವರು ರಾಮ ರಾಜ್ಯವನ್ನು ಪ್ರತಿಪಾದನೆ ಮಾಡಿದವರು. ಸಿದ್ದರಾಮಯ್ಯ ರಾಮನ ವಿಚಾರವನ್ನು ಒಪ್ಪದೇ ಗಾಂಧಿ ವಿಚಾರಧಾರೆಯನ್ನು ಹೇಗೆ ಒಪ್ಪುತ್ತಾರೆ?. ಇದು ಜಮೀನು ಕಬಳಿಸುವ ತಂತ್ರ ಅಲ್ಲವೇ. ಸರ್ಕಾರ ಇದರ ಬಗ್ಗೆ ತನಿಖೆ ಮಾಡಬೇಕು. ರಾತ್ರೋರಾತ್ರಿ ಭೂಮಿಯನ್ನು ಟ್ರಸ್ಟ್ ಹೆಸರಿಗೆ ಮಾಡಿದ್ದಾರೆ ಎಂದು ಸಿದ್ದರಾಮಯ್ಯ ವಿರುದ್ಧ ಆರೋಪಿಸಿದರು.
ಇದನ್ನೂ ಓದಿ: ನಿಮ್ಮ ಬದುಕು ಸರಿಯಾಗಬೇಕಿದ್ದರೆ ಸ್ವತಂತ್ರವಾಗಿ ನಮಗೆ ಅಧಿಕಾರ ಕೊಡಿ: ಹೆಚ್ಡಿಕೆ