ಮೈಸೂರು: ತುಮಕೂರಿನ ಶ್ರೀ ಸಿದ್ದಗಂಗಾ ಮಠದ ಮೂಲಗದ್ದುಗೆಯಲ್ಲಿ ದಿವಂಗತ ಡಾ.ಶಿವಕುಮಾರ ಸ್ವಾಮೀಜಿಯವರ ಸ್ವರ್ಣಲೇಪಿತ ಸುಂದರ ಪ್ರತಿಮೆಯನ್ನು ಮೈಸೂರಿನ ಶಿಲ್ಪಿಯೊಬ್ಬರು ನಿರ್ಮಿಸಿಕೊಟ್ಟಿದ್ದಾರೆ.
ಮೈಸೂರಿನ ಶಿಲ್ಪಿ ಅರುಣ್ ಯೋಗಿರಾಜ್ ಈ ಪ್ರತಿಮೆ ನಿರ್ಮಾಣ ಮಾಡಿದ್ದಾರೆ. ಕೆಲ ತಿಂಗಳ ಹಿಂದೆ ಶ್ರೀಯವರ 5 ಅಡಿ ಎತ್ತರದ ಪ್ರತಿಮೆಯನ್ನು ನಿರ್ಮಿಸಿಕೊಟ್ಟು ಮಠದ ಕಿರಿಯ ಸ್ವಾಮೀಜಿ ಹಾಗೂ ಭಕ್ತರಿಂದ ಪ್ರಶಂಸೆಗೆ ಪಾತ್ರವಾಗಿದ್ದರು. ಇದೀಗ ಒಂದೂವರೆ ತಿಂಗಳ ಪರಿಶ್ರಮವಹಿಸಿದ ಅರುಣ್ ಯೋಗಿರಾಜ್, ಡಾ.ಶಿವಕುಮಾರ ಸ್ವಾಮೀಜಿ ಅವರು ಕುರ್ಚಿಯಲ್ಲಿ ಕುಳಿತುಕೊಂಡಿರುವ ಆಕರ್ಷಕ ಸ್ವರ್ಣ ಲೇಪಿತ ವಿಗ್ರಹವನ್ನು ಮಾಡಿಕೊಟ್ಟಿದ್ದಾರೆ.
ಡಾ.ಶಿವಕುಮಾರ ಸ್ವಾಮೀಜಿ ಅವರ ಗದ್ದುಗೆಯ ಆವರಣದಲ್ಲಿಯೇ ಇರುವ ಪ್ರತಿಮೆಗೆ ನಿತ್ಯ ಪೂಜೆ ಆರಂಭಗೊಂಡಿದೆ. ಶ್ರೀಗಳ ಪ್ರತಿಮೆ ನೋಡಿದ ಕಿರಿಯ ಸ್ವಾಮೀಜಿ ಮೆಚ್ಚುಗೆ ವ್ಯಕ್ತಪಡಿಸಿದ್ದು, ಸಾಕ್ಷಾತ್ ಸ್ವಾಮೀಜಿಯೇ ಬಂದು ಕುಳಿತಿದ್ದಾರೆ ಎಂಬ ಭಾವನೆ ಮೂಡುತ್ತಿದೆ ಎಂದು ಹರ್ಷ ವ್ಯಕ್ತಪಡಿಸಿದರು.