ಮೈಸೂರು: ನಟ ದರ್ಶನ್ ದಿ ಪ್ರಿನ್ಸ್ ಹೋಟೆಲ್ ಸಿಬ್ಬಂದಿ ಮೇಲೆ ಹಲ್ಲೆ ಮಾಡಿದ್ದಾರೆ ಎಂಬ ಆರೋಪಕ್ಕೆ ಸಂಬಂಧಿಸಿದಂತೆ ಹೋಟೆಲ್ ಸಿಬ್ಬಂದಿ ಮತ್ತು ಮಾಲೀಕ ಸಂದೇಶ್ ಸಂಪೂರ್ಣ ವಿವರ ನೀಡಿದ್ದಾರೆ.
ನಟ ದರ್ಶನ್ ಹಲ್ಲೆ ಆರೋಪ ಪ್ರಕರಣದ ಹಿನ್ನೆಲೆಯಲ್ಲಿ ಗೃಹ ಸಚಿವರ ಸೂಚನೆಯ ಆದೇಶದಂತೆ ತನಿಖೆ ಕೈಗೊಂಡಿರುವ ಮೈಸೂರಿನ ಎಸಿಪಿ ನೇತೃತ್ವದ ತಂಡ ಇಂದು ಸಂದೇಶ್ ಪ್ರಿನ್ಸ್ ಹೋಟೆಲ್ಗೆ ಆಗಮಿಸಿ, ಘಟನೆಯ ಬಗ್ಗೆ ಅಂದು ಕೆಲಸ ನಿರ್ವಹಿಸುತ್ತಿದ್ದ ಸಿಬ್ಬಂದಿಯಿಂದ ಮಾಹಿತಿ ಪಡೆದರು. ನಂತರ ಹೋಟೆಲ್ನಲ್ಲಿದ್ದ ಸಿಸಿಟಿವಿ ಹಾಗೂ ಕೆಲವು ಮಹತ್ವದ ದಾಖಲೆಗಳನ್ನು ಪಡೆದು ಹೋದರು.
ನಂತರ ಮಾತನಾಡಿದ ಹೋಟೆಲ್ ಸಿಬ್ಬಂದಿ ಸಮೀರ್, ಘಟನೆ ನಡೆದ ದಿನ ಸರ್ವಿಸ್ ತಡವಾಗಿತ್ತು. ಮ್ಯಾನೇಜರ್ ಎಲ್ಲಿ ಎಂದು ಕೋಪದಿಂದ ಕೂಗಾಡಿದರು. ಆದರೆ ನನ್ನ ಮೇಲೆ ಹಲ್ಲೆ ಮಾಡಿಲ್ಲ ಎಂದು ಹೇಳಿದರು.
ಇದನ್ನೂ ಓದಿ: 'ಸರ್ವಿಸ್ ತಡವಾಗಿದ್ದಕ್ಕೆ ದರ್ಶನ್ ಕೋಪಗೊಂಡಿದ್ದರು, ಆದ್ರೆ ಯಾರ ಮೇಲೂ ಹಲ್ಲೆ ಮಾಡಿಲ್ಲ'
ಘಟನೆ ನಡೆದ ದಿನ ದರ್ಶನ್ ಸರ್ ಕೋಪದಲ್ಲಿದ್ದರು. ನಮ್ಮ ಮೇಲೆ ಹಲ್ಲೆ ಮಾಡಿಲ್ಲ, ಕೂಗಾಡಿದರು. ನಾನು ಆಗ ಎಂಡಿಗೆ ಫೋನ್ ಮಾಡಿ ತಿಳಿಸಿದೆ ಎಂದು ಬೆಲ್ ಬಾಯ್ ಪ್ರಸನ್ನ ವಿವರಿಸಿದರು.
ಇನ್ನು ಪೊಲೀಸ್ ತನಿಖೆಯ ನಂತರ ಘಟನೆ ಬಗ್ಗೆ ವಿವರಿಸಿದ ಹೋಟೆಲ್ ಮಾಲೀಕ ಸಂದೇಶ್, ನಾವು ಯಾರನ್ನು ಜಾತಿ-ಧರ್ಮ ನೋಡಿ ಕೆಲಸಕ್ಕೆ ತೆಗೆದುಕೊಳ್ಳುವುದಿಲ್ಲ. ಅನುಭವ ಇದ್ದರೆ ಮಾತ್ರ ಕೆಲಸಕ್ಕೆ ತೆಗೆದುಕೊಳ್ಳುತ್ತೇವೆ. ಅಂದು ನಡೆದ ಘಟನೆಯ ಬಗ್ಗೆ ಇಂದು ಪೊಲೀಸರು ಎಲ್ಲಾ ದಾಖಲೆಗಳನ್ನು ಪಡೆದುಕೊಂಡು ಹೋಗಿದ್ದಾರೆ ಎಂದರು.