ಮೈಸೂರು: ಈ ಹಿಂದಿನ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ವಿರುದ್ಧ ಇರುವ 5 ದೂರುಗಳಿಗೆ ಸಂಬಂಧಿಸಿದಂತೆ ತನಿಖಾಧಿಕಾರಿಗಳ ಮುಂದೆ ಶಾಸಕ ಸಾ ರಾ ಮಹೇಶ್ ಅವರಿಂದು 1,200 ಪುಟಗಳ ದಾಖಲೆ ಸಲ್ಲಿಸಿದ್ದಾರೆ.
ಐದು ದೂರು ದಾಖಲು: ರೋಹಿಣಿ ಸಿಂಧೂರಿ ವಿರುದ್ಧ ಹೆಚ್ಚಿನ ಬೆಲೆಗೆ ಬಟ್ಟೆ ಬ್ಯಾಗ್ ಖರೀದಿ, ಪಾರಂಪರಿಕ ಕಟ್ಟಡದಲ್ಲಿ ಕಾನೂನು ಉಲ್ಲಂಘಿಸಿ ಈಜು ಕೊಳ ನಿರ್ಮಾಣ, ಕೋವಿಡ್ನಿಂದ ಮೃತಪಟ್ಟ ವ್ಯಕ್ತಿಗಳ ಸಾವಿನ ಲೆಕ್ಕಾಚಾರದಲ್ಲಿ ಲೋಪ, ಚಾಮರಾಜನಗರ ಆಕ್ಸಿಜನ್ ದುರಂತ ಹಾಗೂ ನಿರ್ಮಿತಿ ಕೇಂದ್ರಕ್ಕೆ ಸಂಬಂಧಿಸಿದಂತೆ ಐದು ದೂರುಗಳು ದಾಖಲಾಗಿವೆ. ಪ್ರಕರಣದ ತನಿಖಾಧಿಕಾರಿ ರವಿಶಂಕರ್ ಅವರಿಗೆ ಇದೀಗ ಸಾರಾ ಮಹೇಶ್ 1,200 ಪುಟಗಳ ದಾಖಲೆಗಳನ್ನು ಒಪ್ಪಿಸಿದ್ದಾರೆ.
ರೋಹಿಣಿ ಸಿಂಧೂರಿ ಅಮಾನತು ಮಾಡಿ: ಬಳಿಕ ಶಾಸಕರು ಮಾಧ್ಯಮಗಳ ಮುಂದೆ ಮಾತನಾಡಿ, 30 ದಿನಗಳಲ್ಲಿ ವಿಚಾರಣೆ ಪ್ರಕ್ರಿಯೆ ಮುಗಿಯಲಿದೆ. ಈ ಐದು ಪ್ರಕರಣಗಳಲ್ಲಿ ನನ್ನ ಎಲ್ಲ ಆರೋಪಗಳಿಗೆ ಸಂಬಂಧಿಸಿದಂತೆ ದಾಖಲೆಗಳನ್ನು ನೀಡಿದ್ದೇನೆ. ನಾನು ಯಾವುದೇ ದುರುದ್ದೇಶದಿಂದ ಈ ಆರೋಪ ಮಾಡುತ್ತಿಲ್ಲ. ಪ್ರಕರಣದ ಬಗ್ಗೆ ಎಲ್ಲವನ್ನು ದಾಖಲೆಸಮೇತ ನೀಡಿದ್ದೇನೆ. ತನಿಖೆಯ ಮೇಲೆ ವಿಶ್ವಾಸವಿದೆ. ರೋಹಿಣಿ ಸಿಂಧೂರಿ ಅವರನ್ನು ಅಮಾನತು ಮಾಡಬೇಕು ಎಂದು ಆಗ್ರಹಿಸಿದರು.
ಮೊಟ್ಟೆ ಎಸೆದಿದ್ದು ಸರಿಯಲ್ಲ: ಕೊಡಗು ಜಿಲ್ಲಾ ಪ್ರವಾಸದ ಸಂದರ್ಭದಲ್ಲಿ ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಕಾರಿನ ಮೇಲೆ ಮೊಟ್ಟೆ ಎಸೆದದ್ದು ಸರಿಯಲ್ಲ. ಇದನ್ನು ಖಂಡಿಸುತ್ತೇವೆ. ಐದು ವರ್ಷ ಈ ರಾಜ್ಯದ ಮುಖ್ಯಮಂತ್ರಿ ಆಗಿದ್ದ ಸಿದ್ದರಾಮಯ್ಯ ಈಗ ವಿರೋಧ ಪಕ್ಷದ ನಾಯಕರಾಗಿದ್ದಾರೆ. ಅವರ ಮೇಲೆ ಮೊಟ್ಟೆ ಎಸೆಯುವುದು ಸರಿಯಲ್ಲ ಎಂದರು.
ಇದನ್ನೂ ಓದಿ: ರೋಹಿಣಿ ಸಿಂಧೂರಿಗೆ ನೋಟಿಸ್: ಶನಿವಾರ ಖುದ್ದು ಕಾರ್ಯದರ್ಶಿ ಕಚೇರಿಗೆ ಹಾಜರಾಗಲು ಸೂಚನೆ
ಇದನ್ನೇ ಮುಂದಿಟ್ಟುಕೊಂಡು ಕಾಂಗ್ರೆಸ್ ದೊಡ್ಡಮಟ್ಟದ ಹೋರಾಟಕ್ಕೆ ಮುಂದಾಗಿರುವುದು ಕೂಡ ಸರಿಯಲ್ಲ. ಕಾಂಗ್ರೆಸ್ ಪ್ರತಿಭಟನೆ ವೇಳೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಭಾವಚಿತ್ರಕ್ಕೆ ಮೊಟ್ಟೆ ಹೊಡೆಯುವುದು, ಬೆಂಕಿ ಹಚ್ಚುವುದನ್ನು ಮಾಡುತ್ತಿದ್ದಾರೆ. ಇದು ಸರಿಯಲ್ಲ ಎಂದು ಶಾಸಕ ಸಾ ರಾ ಮಹೇಶ್ ಹೇಳಿದರು.