ಮೈಸೂರು: ಶಾಸಕ ಸಾ.ರಾ.ಮಹೇಶ್ ಒಬ್ಬ ಹೇಡಿ, ಪಲಾಯನವಾದಿ ಎಂದು ಅನರ್ಹ ಶಾಸಕ ಎಚ್.ವಿಶ್ವನಾಥ್ ಏಕವಚನದಲ್ಲಿ ಕಟುವಾಗಿ ಟೀಕಿಸಿದ್ದಾರೆ.
ಚಾಮುಂಡೇಶ್ವರಿ ದೇವಸ್ಥಾನದ ಮುಂಭಾಗ ಅರ್ಧಗಂಟೆಗೂ ಹೆಚ್ಚು ಸಮಯ ಕಾದು ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಸದನದಲ್ಲಿ ಸಾ.ರಾ ಮಹೇಶ್ ನಾನು ರಾಜೀನಾಮೆ ನೀಡಲು 25 ಕೋಟಿ ರೂ. ಹಣ ಪಡೆದಿದ್ದಾರೆ ಎಂದು ಆರೋಪ ಮಾಡಿದ್ದಾರೆ. ದೇವಸ್ಥಾನಕ್ಕೆ ಬಂದು ನನ್ನನ್ನು ಮುಖಾಮುಖಿಯಾಗಿ ಭೇಟಿಯಾಗದೆ ಹೇಡಿ, ಪಲಾಯನವಾದಿಯಂತೆ ಓಡಿ ಹೋಗಿದ್ದಾರೆ ಎಂದು ಹರಿಹಾಯ್ದರು.
ವಿಧಾನಸೌಧ ಕೆಂಗಾಲ್ ಹನುಮಂತಯ್ಯ ಕಟ್ಟಿಸಿದ ಪವಿತ್ರವಾದ ಸ್ಥಳ. ಅಲ್ಲಿ ಕುಳಿತು ನಿರಾಧಾರ ಆರೋಪ ಮಾಡುವುದಲ್ಲ, ನೇರವಾಗಿ ಮಾತನಾಡಲಿ. ಅವರ ಮೇಲೆ ದೂರು ನೀಡ್ತೀನಿ ಎಂದು ಕಿಡಿಕಾರಿದರು.
ದೇವಸ್ಥಾನದ ಮುಂಭಾಗ ಸಾ.ರಾ.ಮಹೇಶ್ಗಾಗಿ ಕಾಯುತ್ತಾ ನಿಂತಿದ್ದ ವಿಶ್ವನಾಥ್ ಅವರಿಗೆ ಡಿಸಿಪಿ ಎಂ.ಮುತ್ತುರಾಜ್, ಜನರಿಗೆ ತೊಂದರೆಯಾಗುತ್ತಿದ್ದು ಕಾನೂನು ಸುವ್ಯವಸ್ಥೆ ಸಮಸ್ಯೆ ಶುರುವಾಗಿದೆ. ಹಾಗಾಗಿ ಜಾಗ ಖಾಲಿ ಮಾಡಿ ಎಂದು ತಿಳಿಸಿದ್ರು.ಆದ್ರೆ, ಆ ಬಗ್ಗೆ ವಿಶ್ವನಾಥ್ ತಲೆಕೆಡಿಸಿಕೊಳ್ಳದೆ ನಿಂತಿದ್ದರು. ಇಬ್ಬರು ರಾಜಕೀಯ ನಾಯಕರ ಆಣೆ ಪ್ರಮಾಣ ಪ್ರಹಸನ ಪೊಲೀಸರು ಹಾಗೂ ಭಕ್ತಾದಿಗಳಿಗೂ ಕಿರಿಕಿರಿ ಉಂಟುಮಾಡಿತು.