ಮೈಸೂರು: ಹೊಸ ವರ್ಷಾಚರಣೆ ಹಿನ್ನೆಲೆ ಚಾಮುಂಡಿ ಬೆಟ್ಟಕ್ಕೆ ಸಾರ್ವಜನಿಕರಿಗೆ ನಿರ್ಬಂಧ ವಿಧಿಸಿ ನಗರ ಪೊಲೀಸ್ ಕಮಿಷನರ್ ಆದೇಶ ಹೊರಡಿಸಿದ್ದಾರೆ.
ಪ್ರಸಿದ್ಧ ಐತಿಹಾಸಿಕ ಮತ್ತು ಧಾರ್ಮಿಕ ಸ್ಥಳವಾದ ಚಾಮುಂಡಿ ಬೆಟ್ಟಕ್ಕೆ ಸಾರ್ವಜನಿಕರು ಪ್ರವೇಶಿಸದಂತೆ ನಿರ್ಬಂಧ ವಿಧಿಸಲಾಗಿದೆ. ಹೊಸ ವರ್ಷಾಚರಣೆಯ ಸಂದರ್ಭದಲ್ಲಿ ಚಾಮುಂಡಿ ಬೆಟ್ಟದ ರಸ್ತೆ , ವ್ಯೂ ಪಾಯಿಂಟ್ ಹಾಗೂ ಕಾಡಿನ ಪ್ರದೇಶಗಳಲ್ಲಿ ಹೊಸ ವರ್ಷದ ಆಚರಣೆಗೆ ಬರುವ ಜನರಿಂದ ತೊಂದರೆಯಾಗುವ ಹಿನ್ನೆಲೆ ಹಾಗೂ ಮೋಜು ಮಸ್ತಿ ಮಾಡುವುದರಿಂದ ಅಪರಾಧಿ ಕೃತ್ಯಗಳು ನಡೆಯುವ ಸಾಧ್ಯತೆ ಇರುವ ಹಿನ್ನೆಲೆಯಲ್ಲಿ ನಿರ್ಬಂಧ ವಿಧಿಸಲಾಗಿದೆ.
ಚಾಮುಂಡಿ ಬೆಟ್ಟಕ್ಕೆ ತೆರಳುವ ರಸ್ತೆಗಳಾದ ಉತ್ತನಹಳ್ಳಿ ಗೇಟ್, ದೈವೀವನ ಗೇಟ್, ಲಲಿತ್ ಮಹಲ್ ಗೇಟ್, ಚಾಮುಂಡಿ ಬೆಟ್ಟದ ಗೇಟ್ಗಳನ್ನು ಡಿಸೆಂಬರ್ 31 ರ ಸಂಜೆ 7 ಗಂಟೆಯಿಂದ ಜನವರಿ 1 ರ ಬೆಳಗ್ಗೆ 6 ಗಂಟೆವರೆಗೆ ಹಾಗೂ ಚಾಮುಂಡಿ ಬೆಟ್ಟಕ್ಕೆ ಸಂಪರ್ಕ ಕಲ್ಪಿಸುವ ಮುಖ್ಯ ರಸ್ತೆಯಾದ ತಾವರೆಕಟ್ಟೆ ಗೇಟ್ ರಸ್ತೆಯನ್ನು ಡಿಸೆಂಬರ್ 31 ರ ರಾತ್ರಿ 9 ರಿಂದ ಜನವರಿ 1 ರ ಸಂಜೆ 6 ಗಂಟೆಯ ವರೆಗೆ ನಿಷೇಧ ಹೇರಲಾಗಿದೆ.
ಇನ್ನು ಈ ನಿಷೇಧ ಚಾಮುಂಡಿ ಬೆಟ್ಟದಲ್ಲಿ ವಾಸಮಾಡುವ ನಿವಾಸಿಗಳಿಗೆ ಅನ್ವಯಿಸುವುದಿಲ್ಲ ಎಂದು ನಗರ ಪೊಲೀಸ್ ಕಮಿಷನರ್ ಕೆ.ಟಿ ಬಾಲಕೃಷ್ಣ ನವರು ಅಧಿಸೂಚನೆ ಹೊರಡಿಸಿದ್ದಾರೆ.