ಮೈಸೂರು: ಗಿರೀಶ್ ಕಾರ್ನಾಡ್ ಹಾಗೂ ನನ್ನ ನಡುವೆ ಪತ್ರಿಕೆಯಲ್ಲಿ ಒಂದು ತಿಂಗಳ ಕಾಲ ನಡೆದ ಪತ್ರ ಸಮರಕ್ಕೆ ಪಂಡಿತ ರಾಜೀವ್ ತಾರಾನಾಥ್ ಅಂತ್ಯವಾಡಿದ್ದರು ಎಂದು ಸಾಹಿತಿ ಡಾ.ವಿಜಯ್ ಅವರು ನೆನಪು ಮಾಡಿಕೊಂಡರು.
ರಂಗಾಯಣ ಹಾಗೂ ನಗುವನ ಕ್ರಿಯೇಷನ್ ವತಿಯಿಂದ ರಂಗಾಯಣದ ಭೂಮಿಗೀತದಲ್ಲಿ ಶುಕ್ರವಾರ ಏರ್ಪಡಿಸಿದ್ದ ಸರೋದ ವಾದಕ ಪಂಡಿತ್ ರಾಜೀವ್ ತಾರಾನಾಥ್ ಅವರ ಸಾಕ್ಷ್ಯಚಿತ್ರ ಬಿಡುಗಡೆಗೊಳಿಸಿದರು.
ನಂತರ ಮಾತನಾಡಿದ ಅವರು, ಗಿರೀಶ್ ಕಾರ್ನಾಡ್ ಹಾಗೂ ನನಗೆ ಒಂದು ಸಂದರ್ಭದಲ್ಲಿ ಬಹಳ ದೊಡ್ಡ ವಿವಾದವಾಗಿತ್ತು, ಅದು ತಿಂಗಳುಗಳ ಪತ್ರ ಸಮರವಾಗಿತ್ತು,ಕಡೆಗೆ ರಾಜೀವ್ ಮಧ್ಯ ಪ್ರವೇಶಿಸಿ, ಪೆನ್ನು ಕಾಗದ ತೆಗೆದುಕೊಂಡು, ವ್ಯವಸ್ಥೆಯೊಂದು ಬಹುದೊಡ್ಡ ತಪ್ಪು ಮಾಡಿ ತಣ್ಣಗೆ ಕುಳಿತಿದೆ. ಎರಡು ಸೃಜನಶೀಲ ಹೃದಯಗಳು ಎರಡು ಸೃಜನಶೀಲ ಶಕ್ತಿಗಳು ವ್ಯರ್ಥವಾಗಿ ಪತ್ರ ವ್ಯವಹಾರ ಮಾಡಿ ಸಮಯವನ್ನು ಕಳೆಯುತ್ತಿದೆ. ದಯಮಾಡಿ ಇಲ್ಲಿಗೆ ನಿಲ್ಲಿಸಿ, ಅಂತ ಪತ್ರಿಕೆಗೆ ಕಳುಹಿಸಿದಾಗ ಗಿರೀಶ್ ಹಾಗೂ ನಾನು ಬಾಯಿ ಮುಚ್ಚಿಕೊಂಡೆವು ಎಂದರು.
ರಾಮಕೃಷ್ಣ ಹೆಗೆಡೆ ಮುಖ್ಯಮಂತ್ರಿಯಾಗಿದ್ದಾಗ ನಾನು ಅವರೊಂದಿಗೆ ಮಾತನಾಡಿ, ಪ್ರತಿಭಾನಿತ್ವ ರಾಜೀವ್‌ನನ್ನು ತಮಿಳುನಾಡಿನ ಜನ ಕೂರಿಸಿಕೊಂಡಿದ್ದಾರೆ. ನಮಗೆ ನಾಚಿಕೆಯಾಗಬೇಕು ಎಂದಾಗ, ರಾಮಕೃಷ್ಣ ಹೆಗಡೆ ಅವರು ಸಂಸ್ಕೃತಿ ಇಲಾಖೆಯಲ್ಲಿ ರಿಜಿಸ್ಟರ್ ಹುದ್ದೆ ಸೃಷ್ಟಿ ಮಾಡಿ ರಾಜೀವ್ ಅವರನ್ನು ಬೆಂಗಳೂರಿಗೆ ಕರೆಸಿದರು, ವಿಶ್ವಕನ್ನಡ ಸಮ್ಮೇಳನದಲ್ಲಿ ಕುವೆಂಪು, ಶಿವರಾಂ ಕಾರಂತರು ಒಂದೇ ಎಂದು ಕಾಣುವಲ್ಲಿ ರಾಜೀವ್ ಅವರ ಆಲೋಚನೆ ಶಕ್ತಿ ಇತ್ತು ಎಂದರು.
ಪದ್ಮಶ್ರೀ ನಿರಾಕರಿಸಬೇಕು ಎನ್ನುವ ತೀರ್ಮಾನ ತೆಗೆದುಕೊಂಡಿದ್ದೆ, ರಾಜೀವ್ ಅವರು ಫೋನ್ ಮಾಡಿ ಬುದ್ದಿ ಹೇಳಿದ್ರು, ಯಾರು ಏನು ಹೇಳಿದ್ರು, ನೀನು ಈ ಪ್ರಶಸ್ತಿ ತೆಗೆದುಕೊಳ್ಳಬೇಕು ಎಂದರು ಎಂದು ನೆನೆದರು.