ಮೈಸೂರು : ರಾಜ್ಯ ಪ್ರಾದೇಶಿಕ ಕಾಂಗ್ರೆಸ್ ವತಿಯಿಂದ ಈಶ್ವರಪ್ಪನವರನ್ನು ಬಂಧಿಸಬೇಕು ಎಂದು ಜಿಲ್ಲಾ ಕೇಂದ್ರಗಳಲ್ಲಿ ಪ್ರತಿಭಟನೆ ನಡೆಸಲಾಗುತ್ತಿದೆ. ಭ್ರಷ್ಟಾಚಾರ ಕಾಯ್ದೆಯಡಿಯಲ್ಲಿ ಈಶ್ವರಪ್ಪನವರನ್ನು ಬಂಧಿಸಬೇಕು ಎಂದು ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿ ಒತ್ತಾಯಿಸಲಾಗಿದೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಆರ್ ಧ್ರುವನಾರಾಯಣ್ ತಿಳಿಸಿದರು.
ಇಂದು ಕರ್ನಾಟಕ ರಾಜ್ಯ ಪ್ರಾದೇಶಿಕ ಕಾಂಗ್ರೆಸ್ ವತಿಯಿಂದ ಸಿದ್ದರಾಮಯ್ಯ ನೇತೃತ್ವದಲ್ಲಿ ಈಶ್ವರಪ್ಪ ಅವರನ್ನು ಬಂಧಿಸುವಂತೆ ಪ್ರತಿಭಟನೆ ನಡೆಸಲಾಯಿತು. ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದ ನಂತರ ಮಾಧ್ಯಮಗಳ ಜೊತೆ ಮಾತನಾಡಿದ ಆರ್ ಧ್ರುವನಾರಾಯಣ್, ಭ್ರಷ್ಟಾಚಾರ ಕಾಯ್ದೆಯಡಿ ಈಶ್ವರಪ್ಪ ಅವರನ್ನು ಬಂಧಿಸುವಂತೆ ಡಿಸಿಗೆ ಮನವಿ ಸಲ್ಲಿಸಿ ಒತ್ತಾಯಿಸಲಾಗಿದೆ. ಜೊತೆಗೆ ಸಂತೋಷ್ ಪಾಟೀಲ್ ಅವರ ಕುಟುಂಬಕ್ಕೆ ಪರಿಹಾರ, ಸಂತೋಷ್ ಅವರ ಪತ್ನಿಗೆ ಸರ್ಕಾರಿ ಉದ್ಯೋಗ ನೀಡಬೇಕು ಎಂದು ಮನವಿ ಮಾಡಲಾಗಿದೆ ಎಂದರು.
ಕಾಂಗ್ರೆಸ್ ಪ್ರತಿಭಟನೆ ಕೇವಲ ಜನಾಂದೋಲನಕ್ಕೆ ಮಾತ್ರ ಸೀಮಿತವಾಗಿದೆಯಾ ಇಲ್ಲ ಕಾನೂನಾತ್ಮಕ ಹೋರಾಟಕ್ಕೆ ಮುಂದಾಗುತ್ತಾ ಎಂಬ ಮಾಧ್ಯಮಗಳ ಪ್ರಶ್ನೆಗೆ ಪ್ರತಿಕ್ರಿಯಿಸಿ, ಕಾಂಗ್ರೆಸ್ನವರು ಅಹೋರಾತ್ರಿ ವಿಧಾನಸೌಧದ ಮುಂಭಾಗ ಪ್ರತಿಭಟನೆ ನಡೆಸಿದ್ದರ ಪರಿಣಾಮ ಈಶ್ವರಪ್ಪ ಅವರು ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಅದಕ್ಕೂ ಮೊದಲು ಅವರು ರಾಜೀನಾಮೆ ಕೊಡುವುದಿಲ್ಲ ಎಂದು ಉದ್ಧಟತನ ತೋರಿದ್ದರು. ಈಶ್ವರಪ್ಪನವರನ್ನು ಬಂಧಿಸಬೇಕು ಎಂಬುದು ನಮ್ಮ ಒತ್ತಾಯ. ರಾಜ್ಯಾದ್ಯಂತ ಈ ಚಳವಳಿ ಮಾಡಲಾಗುತ್ತದೆ ಎಂದರು.
ಇದನ್ನೂ ಓದಿ: ರಾಜಧಾನಿಯ ನಾಲ್ಕು ದಿಕ್ಕಿನಲ್ಲಿ ತಾಯಿ-ಮಗುವಿನ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ : ಡಾ.ಕೆ. ಸುಧಾಕರ್
ಭ್ರಷ್ಟಾಚಾರದ ವಿರುದ್ಧ ಜನಜಾಗೃತಿ ಮೂಡಿಸುವಂತೆ ಸಿದ್ದರಾಮಯ್ಯನವರು ಕರೆ ನೀಡಿದ್ದಾರೆ. ಮುಂದಿನ ದಿನಗಳಲ್ಲಿ ಡಿ ಕೆ ಶಿವಕುಮಾರ್, ಸಿದ್ದರಾಮಯ್ಯ ಹಾಗೂ ಕಾಂಗ್ರೆಸ್ ನಾಯಕರು ಸೇರಿ ಸಭೆ ನಡೆಸಿ ವಿಧಾನಸಭಾ ಕ್ಷೇತ್ರವಾರು ಪ್ರತಿಭಟನೆ ಹಮ್ಮಿಕೊಳ್ಳಲಾಗುತ್ತದೆ ಎಂದು ಆರ್ ಧ್ರುವನಾರಾಯಣ್ ತಿಳಿಸಿದರು.