ಮೈಸೂರು : ಹಿರಿಯ ರಾಜಕಾರಣಿ ರಮೇಶ್ ಕುಮಾರ್ ಸದನದಲ್ಲಿ ರೇಪ್ ಬಗ್ಗೆ ಆ ರೀತಿ ಹೇಳಿಕೆ ನೀಡಿದ್ದು ವಿಷಾದನೀಯ ಎಂದು ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಪ್ರಮೀಳಾ ನಾಯ್ಡು ಅಭಿಪ್ರಾಯ ವ್ಯಕ್ತಪಡಿಸಿದರು.
ಅತ್ಯಾಚಾರ ಕುರಿತು ರಮೇಶ್ ಕುಮಾರ್ ಹೇಳಿಕೆ : ನಗರದ ಮಾನಸ ಗಂಗೋತ್ರಿಯ ವಿಜ್ಞಾನ ಭವನದಲ್ಲಿ ಏರ್ಪಡಿಸಿದ್ದ ಕಾನೂನು ಅರಿವು ಕಾರ್ಯಕ್ರಮದ ಮುನ್ನ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, 'ಅತ್ಯಾಚಾರ ತಡೆಯಲಾಗದಿದ್ರೆ ಮಲಗಿ ಆನಂದಿಸಬೇಕು' ಎಂದಿರುವ ರಮೇಶ್ ಕುಮಾರ್ ಹಿರಿಯ ನಾಯಕರು, ಸದನದಲ್ಲಿ ಆ ರೀತಿ ನಡೆದುಕೊಳ್ಳಬಾರದಿತ್ತು. ಇದನ್ನು ವಿಷಾದಿಸುತ್ತೇನೆ ಎಂದು ಹೇಳಿದರು.
ಕೇಂದ್ರ ಸರ್ಕಾರ ಯುವತಿಯರಿಗೆ ಮದುವೆಗೆ 21 ವರ್ಷ ನಿಗದಿ ಮಾಡಿರುವುದು ಸ್ವಾಗತಾರ್ಹ. ಹೆಣ್ಣು ಮಕ್ಕಳಿಗೆ 18 ರಿಂದ 21 ವರ್ಷಕ್ಕೆ ಏರಿಕೆ ಮಾಡಿರುವುದರಿಂದ ಮದುವೆಗೆ ಮಾನಸಿಕ ಹಾಗೂ ದೈಹಿಕವಾಗಿ ಸದೃಢರಾಗಿರುತ್ತಾರೆ ಎಂದರು.
ರಾಜ್ಯದಲ್ಲಿ ಬಾಲ್ಯ ವಿವಾಹ ಕಡಿಮೆಯಾಗಿದೆ. ವರದಕ್ಷಿಣೆ ಕಿರುಕುಳ ಇಳಿಕೆ ಕಂಡಿದೆ. ರಾಜ್ಯದಿಂದ ಬೇರೆ ರಾಜ್ಯಗಳಿಗೆ ವಿವಾಹವಾಗಿರುವ ಯುವತಿಯರಿಂದ ವರದಕ್ಷಿಣೆ ಪ್ರಕರಣಗಳು ಕೇಳಿ ಬರುತ್ತಿವೆ. ಗಡಿಭಾಗ ಹಾಗೂ ಆಯಾಯ ಜಿಲ್ಲೆಯ ಅಧಿಕಾರಿಗಳು ಬಾಲ್ಯ ವಿವಾಹ ತಡೆಯಲು ಮತ್ತಷ್ಟು ಜಾಗೃತರಾಗಬೇಕು ಎಂದು ಪ್ರಮೀಳಾ ನಾಯ್ಡು ಅವರು ತಿಳಿಸಿದರು.