ಮೈಸೂರು : ಮೈಸೂರು ವಿಶ್ವವಿದ್ಯಾನಿಲಯದ 102ನೇ ಘಟಿಕೋತ್ಸವದಲ್ಲಿ ನಟಸಾರ್ವಭೌಮ ಪುನೀತ್ ರಾಜಕುಮಾರ್ ಅವರಿಗೆ ಮರಣೋತ್ತರ ಗೌರವ ಡಾಕ್ಟರೇಟ್ ಅನ್ನು ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಪ್ರದಾನ ಮಾಡಿದರು.
ಇದಲ್ಲದೇ, ಇನ್ನಿಬ್ಬರು ಸಾಧಕರಾದ ಡಾ. ವಾಸುದೇವ ಕೆ.ಆತ್ರೆ, ಜನಪದ ಕಲಾವಿದ ಮಹಾದೇವಸ್ವಾಮಿ ಅವರಿಗೂ ಗೌರವ ಡಾಕ್ಟರೇಟ್ ಹಾಗೂ ವಿದ್ಯಾರ್ಥಿಗಳಿಗೆ ಚಿನ್ನದ ಪದಕ, ಪದವಿ ಪ್ರದಾನ ಮಾಡಲಾಯಿತು.
ಇನ್ನು ಪ್ರಶಸ್ತಿ ಪ್ರದಾನ ಮಾಡಿದ ಬಳಿಕ ಮಾತನಾಡಿದ ಥಾವರ್ ಚಂದ್ ಗೆಹ್ಲೋಟ್, ಇಡೀ ವಿಶ್ವದಲ್ಲೇ ನಮ್ಮ ದೇಶದ ಪ್ರಜಾಪ್ರಭುತ್ವ ವ್ಯವಸ್ಥೆ ಉನ್ನತ ಸ್ಥಾನದಲ್ಲಿದೆ. ಪ್ರಸ್ತುತ ದೇಶಾದ್ಯಂತ ಸ್ವಾತಂತ್ರ ಅಮೃತ ಮಹೋತ್ಸವವನ್ನು ಆಚರಿಸಲಾಗುತ್ತಿದೆ. ಮಹನೀಯರು ತಂದುಕೊಟ್ಟ ಸ್ವಾತಂತ್ರವನ್ನು ಮತ್ತಷ್ಟು ಬಲಪಡಿಸಿ, ಸ್ವಸ್ಥ ಸಮಾಜದ ನಿರ್ಮಾಣಕ್ಕೆ ಯುವ ಪೀಳಿಗೆ ಮುಂದಾಗಬೇಕೆಂದು ಕರೆ ನೀಡಿದರು.
ವಿದ್ಯಾರ್ಥಿಗಳಿಗೆ ಪದವಿ ಪ್ರದಾನ : ಸಮಾರಂಭದಲ್ಲಿ ಒಟ್ಟು 28,581 ವಿದ್ಯಾರ್ಥಿಗಳಿಗೆ ಪದವಿ ಪ್ರದಾನ ಮಾಡಲಾಯಿತು. 157 ವಿದ್ಯಾರ್ಥಿಗಳಿಗೆ ಪಿಹೆಚ್‌ಡಿ ಹಾಗೂ 22,747 ವಿದ್ಯಾರ್ಥಿಗಳಿಗೆ ಸ್ನಾತಕೋತ್ತರ ಪದವಿ ನೀಡಲಾಯಿತು.
19 ಚಿನ್ನದ ಪದಕ ಪಡೆದ ವಿದ್ಯಾರ್ಥಿನಿ : ಈ ಬಾರಿಯ ಘಟಿಕೋತ್ಸವದಲ್ಲಿ ರಸಾಯನಶಾಸ್ತ್ರದ ಸ್ನಾತಕೋತ್ತರ ಪದವಿ ವಿಭಾಗದಲ್ಲಿ ಭಾವನಾ ಎಂಬುವರು 19 ಚಿನ್ನದ ಪದಕ ಹಾಗೂ ನಗದು ಬಹುಮಾನವನ್ನು ತಮ್ಮದಾಗಿಸಿಕೊಂಡರು.
ಓದಿ: ಕಾರು-ಬಸ್ ನಡುವೆ ಭೀಕರ ಅಪಘಾತ; ಬೇಲೂರಿನಲ್ಲಿ ಐವರು ವಿದ್ಯಾರ್ಥಿಗಳ ಸಾವು