ಮೈಸೂರು: 2019ರ ಲೋಕಸಭಾ ಚುನಾವಣೆಯ ರಾಜ್ಯದ ಮೊದಲನೇ ಹಂತಕ್ಕೆ ನಡೆದ ಚುನಾವಣೆಯಲ್ಲಿ ಶೇ.68.14ರಷ್ಟು ಮತದಾನದೊಂದಿಗೆ ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದಲ್ಲಿ ಶಾಂತಿಯುತವಾಗಿ ಮತದಾನ ನಡೆದಿದೆ.
ಕಾಂಗ್ರೆಸ್-ಜೆಡಿಎಸ್ ಮೈತ್ರಿ ಅಭ್ಯರ್ಥಿ ಸಿ. ಎಚ್. ವಿಜಯಶಂಕರ್, ಬಿಜೆಪಿ ಅಭ್ಯರ್ಥಿ ಪ್ರತಾಪಸಿಂಹ ಸೇರಿದಂತೆ ಒಟ್ಟು 22 ಮಂದಿ ಕಣದಲ್ಲಿದ್ದಾರೆ. ಗುರುವಾರ ಬೆಳಿಗ್ಗೆ ಸರಾಗವಾಗಿ ಆರಂಭಗೊಂಡ ಮತದಾನ ಸಂಜೆ 6 ರವರೆಗೆ ಯಾವುದೇ ಅಹಿತಕರ ಘಟನೆ ಜರುಗದಂತೆ ಶಾಂತಿಯುತವಾಗಿ ನಡೆದಿದೆ.
ಮಡಿಕೇರಿಯಲ್ಲಿ ಶೇ. 75, ವಿರಾಜಪೇಟೆಯಲ್ಲಿ ಶೇ. 72.23, ಪಿರಿಯಾಪಟ್ಟಣ ಶೇ. 78.60, ಹುಣಸೂರು ಶೇ. 77.45, ಚಾಮುಂಡೇಶ್ವರಿ ಶೇ. 71.75, ಕೃಷ್ಣರಾಜ ಶೇ. 60.46, ಚಾಮರಾಜ ಶೇ. 56, ನರಸಿಂಹರಾಜ ಶೇ. 59.89 ಮತದಾನವಾಗಿದೆ.
ಇನ್ನು ಮಾಜಿ ಸಿಎಂ ಸಿದ್ದರಾಮಯ್ಯ, ಸಿ. ಎಚ್. ವಿಜಯಶಂಕರ್, ಸಂಸದ ಪ್ರತಾಪಸಿಂಹ, ಶ್ರೀನಿವಾಸ್ ಪ್ರಸಾದ್, ಡಾ. ಎಚ್. ಸಿ. ಮಹದೇವಪ್ಪ, ಎ. ಎಚ್. ವಿಶ್ವನಾಥ್, ಸಚಿವ ಜಿ. ಟಿ. ದೇವೇಗೌಡ, ರಾಣಿ ಪ್ರಮೋದಾದೇವಿ, ರಾಜ ಯದುವೀರ್ ದಂಪತಿ, ಡಾ. ಯತೀಂದ್ರ, ಹರ್ಷವರ್ಧನ್ ಸೇರಿದಂತೆ ಹಲವು ರಾಜಕೀಯ ಮುಖಂಡರು, ಗಣ್ಯರು ಮತಚಲಾಯಿಸಿದರು.