ಮೈಸೂರು: ಅರಣ್ಯಾಧಿಕಾರಿ ನೇತೃತ್ವದ ತಂಡ ಮಿಂಚಿನ ದಾಳಿ ನಡೆಸಿ ದುಬಾರಿ ಬೆಲೆಯ ಜೋಡಿ ಗೂಬೆಗಳನ್ನು ಮಾರಾಟ ಮಾಡಲು ಯತ್ನಿಸುತ್ತಿದ್ದ ಓರ್ವನನ್ನು ಬಂಧಿಸಿ ಗೂಬೆಗಳನ್ನು ರಕ್ಷಣೆ ಮಾಡಿದ್ದಾರೆ.
ನೆಲಮಂಗಲ ತಾಲೂಕಿನ ಶಿಖರಿಪುರ ಗ್ರಾಮದ ಧವನಿಕುಮಾರ್ ಬಂಧಿತ ಆರೋಪಿ. ಮತ್ತೊಬ್ಬ ಆರೋಪಿ ಪರಾರಿಯಾಗಿದ್ದಾನೆ. ಈತ ನೆಲಮಂಗಲ ಅರಣ್ಯ ಪ್ರದೇಶದಲ್ಲಿ ಬೃಹತ್ ಗೂಬೆಯನ್ನು ನಿನ್ನೆ ಸೆರೆ ಹಿಡಿದು ಮಾರಾಟ ಮಾಡಲು ಮುಂದಾಗಿದ್ದ. ವಿಷಯ ತಿಳಿದ ಅರಣ್ಯ ಇಲಾಖೆ ಸಿಬ್ಬಂದಿ ಶಿಖರಿಪುರ ಗ್ರಾಮದಲ್ಲಿ ದಾಳಿ ಮಾಡಿದ್ದಾರೆ. ಜತೆಗೆ ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೊಪ್ಪಿಸಲಾಗಿದೆ.
ಆರೋಪಿಗಳು ಗೂಬೆಗಳನ್ನು ಸೆರೆ ಹಿಡಿದು ದೊಡ್ಡದೊಡ್ಡ ಉದ್ಯಮಿಗಳಿಗೆ, ರಾಜಕಾರಣಿಗಳಿಗೆ ಮಾರಾಟ ಮಾಡುವುದರಿಂದ ಲಕ್ಷಾಂತರ ರೂ. ಸಂಪಾದನೆ ಮಾಡುವ ಯೋಜನೆ ರೂಪಿಸಿಕೊಂಡಿದ್ದರು ಎಂದು ತನಿಖೆ ವೇಳೆ ತಿಳಿದು ಬಂದಿದೆ.
ಈ ಸಂಬಂಧ ಮಾಧ್ಯಮಗಳೊಂದಿಗೆ ಮಾತನಾಡಿದ ಅರಣ್ಯ ಇಲಾಖೆ ವಿಚಕ್ಷಣ ದಳದ ಅರಣ್ಯ ಉಪ ಸಂರಕ್ಷಣಾಧಿಕಾರಿ (ಡಿಸಿಎಫ್)ಪೂವಯ್ಯ, ಮೌಢ್ಯತೆಯಿಂದ ಗೂಬೆಗಳನ್ನು ಸೆರೆ ಹಿಡಿದು ಮಾರಾಟ ಮಾಡುತ್ತಾರೆ. ಆದರೆ, ವನ್ಯ ಸಂಪತ್ತಿನ ಪ್ರಾಣಿಗಳಿಗೆ ಬೆಲೆ ಕಟ್ಟಲು ಸಾಧ್ಯವಿಲ್ಲ. ಈಗ ಸಿಕ್ಕಿರುವ ಜೋಡಿ ಗೂಬೆಯನ್ನು ನಾಗರಹೊಳೆ ಅಥವಾ ಬಂಡೀಪುರ ಅರಣ್ಯಕ್ಕೆ ಬಿಡಲಾಗುವುದು ಎಂದರು.