ಮೈಸೂರು: ಜನ ನನ್ನನ್ನ ಮುಂದಿನ ಚುನಾವಣೆಯಲ್ಲಿ ವರುಣಾ, ಚಾಮುಂಡೇಶ್ವರಿ, ಹುಣಸೂರು, ಹೆಬ್ಬಾಳ, ಚಾಮರಾಜಪೇಟೆ, ಕೋಲಾರ ಬಾದಮಿಯಿಂದ ಸ್ಪರ್ಧೆ ಮಾಡುವಂತೆ ಆಹ್ವಾನ ನೀಡುತ್ತಿದ್ದಾರೆ. ಮುಂದಿನ ಚುನಾವಣೆಯೇ ನನ್ನ ಕೊನೆಯ ಚುನಾವಣೆ. ನಾನು ಮುಂದೆ ಚುನಾವಣಾ ರಾಜಕೀಯ ಮಾಡುವುದಿಲ್ಲ, ಆದರೆ, ಸಕ್ರಿಯ ರಾಜಕಾರಣದಲ್ಲಿ ಇರುತ್ತೇನೆ ಎಂದು ಸಿದ್ದರಾಮನಹುಂಡಿಯಲ್ಲಿ ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಹೇಳಿದರು.
ತಮ್ಮ ಹುಟ್ಟೂರಾದ ಸಿದ್ದರಾಮನಹುಂಡಿಯ ಮನೆಯಲ್ಲಿ ಮಾದ್ಯಮಗಳ ಜೊತೆ ಮಾತನಾಡಿದ ಅವರು, ಜನ ನನಗೆ ವರುಣಾ, ಚಾಮುಂಡೇಶ್ವರಿ, ಹುಣಸೂರು, ಹೆಬ್ಬಾಳ, ಚಾಮರಾಜಪೇಟೆ, ಕೋಲಾರ, ಬಾದಮಿಯಿಂದ ಸ್ಪರ್ಧೆ ಮಾಡುವಂತೆ ಆಹ್ವಾನ ನೀಡುತ್ತಿದ್ದಾರೆ. ಆದರೆ, ನಾನು ಎಲ್ಲಿಂದ ಸ್ಪರ್ಧೆ ಮಾಡಬೇಕು ಎಂದು ತೀರ್ಮಾನ ಮಾಡಿಲ್ಲ.
ಚಾಮುಂಡೇಶ್ವರಿ ಕ್ಷೇತ್ರ ನನಗೆ ರಾಜಕೀಯ ಪುನರ್ ಜನ್ಮ ನೀಡಿದೆ. ಕಳೆದ ಬಾರಿ ಅದೇ ಜನ ನನ್ನನ್ನ ಸೋಲಿಸಿದ್ದರು. ಆದರೆ ಐದಾರು ಬಾರಿ ಚಾಮುಂಡೇಶ್ವರಿ ಕ್ಷೇತ್ರದ ಜನ ನನ್ನನ್ನ ಗೆಲ್ಲಿಸಿದ್ದಾರೆ. ಅದಕ್ಕಾಗಿ ಚಾಮುಂಡೇಶ್ವರಿ ಕ್ಷೇತ್ರವನ್ನ ನಾನು ಯಾವಾಗಲೂ ಮರೆಯುವುದಿಲ್ಲ ಎಂದರು.
ಮುಂದಿನ ಚುನಾವಣೆಯೇ ನನ್ನ ಕೊನೆಯ ಚುನಾವಣೆ. ಮತ್ತೆ ಚುನಾವಣಾ ರಾಜಕಾರಣ ಮಾಡುವುದಿಲ್ಲ. ಆದರೆ, ಸಕ್ರಿಯ ರಾಜಕಾರಣದಲ್ಲಿ ಇರುತ್ತೇನೆ. ಅದಕ್ಕಾಗಿ ನನ್ನನ್ನ ಹಲವಾರು ಕ್ಷೇತ್ರದ ಜನ ಸ್ಪರ್ಧೆ ಮಾಡುವಂತೆ ಕರೆಯುತ್ತಿದ್ದಾರೆ. ಚುನಾವಣೆಗೆ ಇನ್ನೂ ಒಂದು ವರ್ಷ ಬಾಕಿ ಇದ್ದು, ಮುಂದೆ ಸೂಕ್ತ ತೀರ್ಮಾನ ಕೈಗೊಳ್ಳುತ್ತೇನೆ ಎಂದರು.
ಮುಸ್ಲಿಂ ವ್ಯಾಪಾರಕ್ಕೆ ನಿರ್ಬಂಧ: ಧಾರ್ಮಿಕ ಕ್ಷೇತ್ರಗಳಲ್ಲಿ ಹಾಗೂ ಕೆಲವು ಪ್ರದೇಶಗಳಲ್ಲಿ ಮುಸ್ಲಿಂ ವ್ಯಾಪಾರಕ್ಕೆ ನಿರ್ಬಂಧ ಹಾಕಿರುವುದು ಸರಿಯಲ್ಲ. ಬಿಜೆಪಿ ಕೆಲವು ವಿವಾದ ಸೃಷ್ಟಿಸಿ ಮತ ಕ್ರೋಢೀಕರಣ ಮಾಡಲು ಯತ್ನಿಸುತ್ತಿದೆ. ಆ ಮೂಲಕ ಬಿಜೆಪಿ ದ್ವೇಷದ ರಾಜಕಾರಣ ಮಾಡುತ್ತಿದೆ. ವ್ಯಾಪಾರಕ್ಕೆ ನಿರ್ಬಂಧ ಹಾಕುವುದರ ಹಿಂದೆ ಬಿಜೆಪಿ ಅಜೆಂಡಾ ಅಡಗಿದೆ. ಮುಸ್ಲಿಂ ವ್ಯಾಪಾರಕ್ಕೆ ನಿರ್ಬಂಧ ವಿಚಾರದಲ್ಲಿ ಕಾಂಗ್ರೆಸ್ ಇಕ್ಕಟಿಗೆ ಸಿಲುಕಿಲ್ಲ. ಬಿಜೆಪಿಯೇ ಇಕ್ಕಟಿಗೆ ಸಿಲುಕಲಿದೆ ಎಂದರು.
ಹಿಜಾಬ್ ವಿವಾದಕ್ಕೆ ಬಿಜೆಪಿಯೇ ಕಾರಣ: ಮುಸ್ಲಿಂ ಹೆಣ್ಣು ಮಕ್ಕಳು ಒಂದು ದುಪ್ಪಟ ತಲೆ ಮೇಲೆ ಹಾಕಿಕೊಳ್ಳುತ್ತೇನೆ ಎಂದರೆ ಅದರಲ್ಲಿ ತಪ್ಪೇನು. ಹಿಂದೂ ಹೆಣ್ಣು ಮಕ್ಕಳು ತಲೆಯ ಮೇಲೆ ಬಟ್ಟೆ ಹಾಕಿಕೊಳ್ಳುವುದಿಲ್ಲವೇ, ಸ್ವಾಮೀಜಿಗಳು ತಲೆಯ ಮೇಲೆ ಬಟ್ಟೆ ಹಾಕಿಕೊಳ್ಳುತ್ತಾರೆ. ಅದನ್ನ ನೀವು ಪ್ರಶ್ನೆ ಮಾಡುತ್ತೀರಾ?.
ಇಂತಹ ವಿವಿಧ ಸೃಷ್ಟಿಸಿ ಅದನ್ನ ಅರಗಿಸಿಕೊಳ್ಳತ್ತೇನೆ ಎಂದು ಬಿಜೆಪಿಯವರು ಅಂದುಕೊಂಡಿದ್ದಾರೆ. ಆದರೆ, ಜನ ಬುದ್ದಿವಂತರು ಬಿಜೆಪಿ ತಂತ್ರ ಅರ್ಥವಾಗುತ್ತದೆ. ಪರಿಹಾರ ವಿಚಾರದಲ್ಲಿಯೂ ತಾರತಮ್ಯ ಮಾಡುತ್ತಿದೆ. ಇದು ಸಹ ಬಿಜೆಪಿ ಲೆಕ್ಕಾಚಾರವನ್ನ ಬುಡಮೇಲು ಮಾಡುತ್ತದೆ ಎಂದರು.
ಸ್ಪೀಕರ್ ಪಕ್ಷಾತೀತವಾಗಿರಬೇಕು: ಸ್ಪೀಕರ್ ನಿನ್ನೆ ಕುರ್ಚಿಯಲ್ಲಿ ಕೂತು ನಮ್ಮ ಆರ್ ಎಸ್ ಎಸ್ ನವರು ಎಂದು ಹೇಳಿದ್ದು ತಪ್ಪು. ಸ್ಪೀಕರ್ ಆದವರು ಪಕ್ಷತೀತವಾಗಿರಬೇಕು. ನಮ್ಮ ಆರ್ ಎಸ್ ಎಸ್ ನವರು ಎಂದು ಹೇಳಿದ್ದು ಸರಿಯಲ್ಲ. ನಾನು ಯಾವಾಗಲೂ ಆರ್ ಎಸ್ ಎಸ್ ವಿರೋಧಿ. ಅವರು ಮನುವಾದಿ ಸಂಸ್ಕೃತಿಯವರು. ಸ್ವತಂತ್ರಕ್ಕಾಗಿ ಹೋರಾಟ ಮಾಡಿಲ್ಲ, ಸಮಾಜ ಒಡೆಯುವುದೇ ಆರ್ ಎಸ್ ಎಸ್ ನ ಅಜೆಂಡಾ. ಅದಕ್ಕಾಗಿ ನಾನು ಆರ್ ಎಸ್ ಎಸ್ ನವರನ್ನು ವಿರೋಧಿಸುತ್ತೇನೆ. ಭಾವನಾತ್ಮಕ ವಿಚಾರಗಳಿಂದಲೇ ಬಿಜೆಪಿಯವರು ಇಕ್ಕಟಿಗೆ ಸಿಲುಕುತ್ತಾರೆ ಎಂದು ಸಿದ್ದರಾಮಯ್ಯ ವಾಗ್ದಾಳಿ ನಡೆಸಿದರು.
ಶಾಸಕ ರೇಣುಕಾಚಾರ್ಯ ಮೇಲೆ ಕ್ರಿಮಿನಲ್ ಕೇಸ್ ದಾಖಲಿಸಿ: ತಮ್ಮ ಪುತ್ರಿಗೆ ಶಾಸಕ ರೇಣುಕಾಚಾರ್ಯ ಸರ್ಕಾರಿ ಸೌಲಭ್ಯ ಪಡೆಯಲು ಎಸ್ಸಿ ಪ್ರಮಾಣ ಪತ್ರ ಪಡೆದಿದ್ದು ಸರಿಯಲ್ಲ. ಕೂಡಲೇ ಶಾಸಕರ ಮೇಲೆ ಕ್ರಿಮಿನಲ್ ಪ್ರಕರಣ ದಾಖಲಿಸಿ, ಸಿಎಂ ಕಾರ್ಯದರ್ಶಿ ಸ್ಥಾನದಿಂದ ವಜಾ ಮಾಡಬೇಕು ಎಂದು ಆಗ್ರಹಿಸಿದರು. ನಿನ್ನೆ ರಾತ್ರಿ ನಾನು ವೀರ ಕುಣಿತ ಮಾಡಿದೆ, ಪ್ರತಿ ದಿನ ವಾಕ್ ಮಾಡುತ್ತೇನೆ. ಆದ್ದರಿಂದ ಫಿಟ್ ಆಗಿದ್ದೇನೆ. ಜನ ಒತ್ತಾಯ ಮಾಡಿದರೂ ಅದಕ್ಕೆ ಸ್ಟೇಪ್ ಹಾಕಿದ್ದೇನೆ ಎಂದು ಸಿದ್ದರಾಮಯ್ಯ ವಿವರಿಸಿದರು.
ಇದನ್ನೂ ಓದಿ: Watch... ಸಿದ್ದರಾಮೇಶ್ವರ ಜಾತ್ರಾ ಮಹೋತ್ಸವದಲ್ಲಿ ಸಖತ್ ಸ್ಟೆಪ್ ಹಾಕಿದ ಸಿದ್ದರಾಮಯ್ಯ