ಮೈಸೂರು: ಕೊರೊನಾ ಸೋಂಕಿತರ ಸಾವು ಹೆಚ್ಚಾದ ಪರಿಣಾಮ, ಮುಂಬೈನ ಧಾರಾವಿ ಕೊಳೆಗೇರಿ ಪ್ರದೇಶದ ರೀತಿಯಲ್ಲಿ ನರಸಿಂಹರಾಜ ಕ್ಷೇತ್ರವನ್ನು (ಎನ್ಆರ್ ಕ್ಷೇತ್ರ) ಲಾಕ್ಡೌನ್ ಮಾಡಲು ಚಿಂತನೆ ನಡೆಸಿದ್ದೇವೆ ಎಂದು ಜಿಲ್ಲಾಧಿಕಾರಿ ಅಭಿರಾಮ್ ಜಿ.ಶಂಕರ್ ತಿಳಿಸಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಎನ್ಆರ್ ಕ್ಷೇತ್ರದಲ್ಲಿ ಕಲ್ಯಾಣಗಿರಿ, ಸುಭಾಷ್ ನಗರ, ಉದಯಗಿರಿ ಈ ಭಾಗದಲ್ಲಿ ಸೋಂಕಿತರ ಸಾವಿನ ಪ್ರಕರಣಗಳು ಹೆಚ್ಚಾಗುತ್ತಿವೆ. ನಿನ್ನೆ(ಶುಕ್ರವಾರ) 200-300 ಮೀಟರ್ ಅಂತರದಲ್ಲಿ ನಾಲ್ವರು ಮೃತಪಟ್ಟಿದ್ದಾರೆ ಎಂದರು.
ಹೀಗಾಗಿ, ಸ್ಥಳೀಯ ಧಾರ್ಮಿಕ ಮುಖಂಡರು ಹಾಗೂ ಸ್ಥಳೀಯ ಜನಪ್ರತಿನಿಧಿಗಳನ್ನು ಕರೆದು ಮಾತನಾಡಿದ್ದೇವೆ. ಈ ಪ್ರದೇಶಗಳಲ್ಲಿ ಒಂದು ವಾರ ಮಿನಿ ಲಾಕ್ಡೌನ್ ಮಾಡಲು ಸಹಕರಿಸಬೇಕು. ಜನರು ಸೋಂಕು ತಗುಲಿದ ಕೊನೆಯ ಹಂತಕ್ಕೆ ಬಂದು ಆಸ್ಪತ್ರೆಗೆ ದಾಖಲಾಗುತ್ತಾರೆ. ಇದರಿಂದ ಸಾವಿನ ಪ್ರಮಾಣ ಹೆಚ್ಚಾಗುತ್ತಿದೆ. ಲಾಕ್ಡೌನ್ ಮಾಡಿದರೆ ಅದನ್ನು ತಪ್ಪಿಸಬಹುದು ಎಂದು ತಿಳಿಸಿದರು.
ಅಧಿಕಾರಿಗಳು, ಆಶಾ ಕಾರ್ಯಕರ್ತರು ಮಾಹಿತಿ ಸಂಗ್ರಹಿಸಲು ಹೋದರೆ ಅಲ್ಲಿನ ಜನ ಸಹಕರಿಸುತ್ತಿಲ್ಲ. ಬಾಗಿಲು ಮುಚ್ಚಿಕೊಂಡು ಹೋಗುತ್ತಾರೆ. ಆದ್ದರಿಂದ ಎನ್ಆರ್ ಕ್ಷೇತ್ರದ ಕೆಲವು ಪ್ರದೇಶಗಳನ್ನು ಮುಂಬೈನ ಧಾರಾವಿ ರೀತಿಯಲ್ಲಿ ಲಾಕ್ಡೌನ್ ಮಾಡಲು ಚಿಂತಿಸಿದ್ದೇವೆ. ಕೊರೊನಾಗೆ ಮೃತರಾದವರನ್ನು ಒಂದೇ ಕಡೆ ಅಂತ್ಯಸಂಸ್ಕಾರ ಮಾಡಲು ಮೈಸೂರಿನ ಹೊರಭಾಗದ ಸರ್ಕಾರಿ ಜಮೀನಿನಲ್ಲಿ ಸ್ಮಶಾನ ನಿರ್ಮಿಸಲು ಒಂದೆರಡು ದಿನಗಳಲ್ಲಿ ಜಾಗ ಅಂತಿಮವಾಗಲಿದೆ. 30 ನಿಮಿಷಗಳ ಕಾಲ ಪ್ರಯಾಣಿಸುವಂತಹ ಜಾಗವನ್ನು ಗುರುತಿಸಲಾಗುವುದು ಎಂದರು.
ಅಲ್ಲದೆ, ಮೃತಪಟ್ಟ ವ್ಯಕ್ತಿಗಳಿಗೆ ಪ್ಲಾಸ್ಟಿಕ್ನಿಂದ ಮುಚ್ಚಿ ಅಂತ್ಯಸಂಸ್ಕಾರ ಮಾಡುತ್ತಿರುವ ಕುರಿತು ಸಾಮಾಜಿಕ ಜಾಲತಾಣದಲ್ಲಿ ವ್ಯತಿರಿಕ್ತ ಪ್ರತಿಕ್ರಿಯೆಗಳು ಬರುತ್ತಿವೆ. ಆದರೆ, ವಿಶ್ವ ಆರೋಗ್ಯ ಸಂಸ್ಥೆಯ ಮಾರ್ಗ ಸೂಚಿಯ ಪ್ರಕಾರವೇ ಅದನ್ನು ನಡೆಸುತ್ತೇವೆ. ಮೈಸೂರಿಗೆ 2,300 ಕೊರೊನಾ ಟೆಸ್ಟಿಂಗ್ ಕಿಟ್ ಬಂದಿದ್ದು, 30-45 ನಿಮಿಷದೊಳಗೆ ಕೋವಿಡ್ ಫಲಿತಾಂಶ ಪಡೆಯಬಹುದಾಗಿದೆ. ಈ ಕಿಟ್ ಅನ್ನು ಎನ್ಆರ್ ಕ್ಷೇತ್ರದ ಮನೆಗಳಿಗೆ ಹೋಗಿ ಟೆಸ್ಟ್ ಮಾಡಲು ಬಳಸುವ ಚಿಂತನೆ ಇದೆ ಎಂದರು.