ಮೈಸೂರು: ಜಿಲ್ಲೆಯಲ್ಲಿ ಐಸಿಯು ಮತ್ತು ಬೆಡ್ಗಳಿಗೆ ಕೊರತೆ ಇಲ್ಲ. ಆದರೆ ಮರಣ ಸಂಖ್ಯೆ ಹೆಚ್ಚಾಗುತ್ತಿರುವುದು ಆತಂಕ ಉಂಟುಮಾಡಿದೆ ಎಂದು ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಹೇಳಿದರು.
ಓದಿ: ಟಫ್ ರೂಲ್ಸ್ ನಾಳೆಯಿಂದ ಜಾರಿ: ಸರ್ವಪಕ್ಷಗಳ ಸಭೆ ಬಳಿಕ ಮಾರ್ಗಸೂಚಿ ಬಿಡುಗಡೆ ಸಾಧ್ಯತೆ
ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಮೈಸೂರು ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ, ಸದ್ಯಕ್ಕೆ 1500 ಬೆಡ್ಗಳು ರೆಡಿ ಇವೆ. ಬೆಂಗಳೂರಿನಲ್ಲಿ ಕೋವಿಡ್ ಪ್ರಕರಣಗಳು ಹೆಚ್ಚಾಗುತ್ತಿದ್ದು, ಇದರ ಪರಿಣಾಮ ಜನರು ಮೈಸೂರಿನ ಕಡೆ ಬರುತ್ತಿದ್ದಾರೆ.
ಅಲ್ಲದೆ ಮೈಸೂರು ಜಿಲ್ಲೆಯಲ್ಲಿ ಚಿಕಿತ್ಸೆಗಾಗಿ ಕೊನೆಯ ಕ್ಷಣದಲ್ಲಿ ಬರುತ್ತಿದ್ದಾರೆ. ಇದರಿಂದ ಕೊರೊನಾ ಸಾವುಗಳು ಇಲ್ಲಿ ಹೆಚ್ಚಾಗುತ್ತಿವೆ. ಮಂಡ್ಯ, ಚಾಮರಾಜನಗರ, ಕೊಡಗು, ಹಾಸನ ಜಿಲ್ಲೆಯಲ್ಲಿ ಕೊರೊನಾ ಪ್ರಕರಣಗಳು ಜಾಸ್ತಿ ಇಲ್ಲ. ಆದರೆ ಮೈಸೂರಿಗೆ ಬೆಂಗಳೂರಿನಿಂದ ಬರುವವರ ಸಂಖ್ಯೆ ಹೆಚ್ಚಾಗುತ್ತಿದ್ದು, ಇಲ್ಲಿ ಸಮಸ್ಯೆಯಾಗುತ್ತಿದೆ.
ಸದ್ಯಕ್ಕೆ ಕೆ.ಆರ್. ಆಸ್ಪತ್ರೆಯ ಐಸಿಯು ಘಟಕ ಪೂರ್ತಿಯಾಗಿದ್ದು, ಖಾಸಗಿ ಆಸ್ಪತ್ರೆಯವರಿಗೆ ಶೇ. 50ರಷ್ಟು ಬೆಡ್ಗಳನ್ನು ನೀಡುವಂತೆ ಈಗಾಗಲೇ ಸೂಚಿಸಲಾಗಿದೆ. ಸದ್ಯಕ್ಕೆ ಮೈಸೂರಿನಲ್ಲಿ ಬೇಡ್ ಕೊರತೆ ಇಲ್ಲ ಎಂದು ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ತಿಳಿಸಿದರು.