ಮೈಸೂರು : ಅವರಿಗೊಂದು ದೇಶ, ಇವರಿಗೊಂದು ದೇಶ ಎಂದು ಎತ್ತಿ ಕೊಡೋಕೆ ದೇಶ ನಿಮ್ಮ ತಾತನದ್ದಾ?. ಭಾರತ ನಮ್ಮದು, ನಾವು ಇಲ್ಲೇ ಹುಟ್ಟಿದ್ದೇವೆ, ಇಲ್ಲೇ ಸಾಯುತ್ತೇವೆ ಎಂದು ಸಂಸದ ಪ್ರತಾಪ್ ಸಿಂಹ ಹೇಳಿಕೆಗೆ ಕಾಂಗ್ರೆಸ್ ಶಾಸಕ ತನ್ವೀರ್ ಸೇಠ್ ತಿರುಗೇಟು ನೀಡಿದರು.
ಹಿಜಾಬ್ ವಿಚಾರದಲ್ಲಿ ಸಂಸದ ಪ್ರತಾಪ್ ಸಿಂಹ ಹೇಳಿಕೆಗೆ ಪ್ರತಿಕ್ರಿಯಿಸಿ, ಈ ದೇಶ ಬಿಟ್ಟು ಬೇರೆ ದೇಶಕ್ಕೆ ಹೋಗಿ ಎಂದು ಹೇಳುವುದಕ್ಕೆ ನೀವು ಯಾರು? ಬೇರೆ ದೇಶಕ್ಕೆ ಹೋಗಿ ಎಂದು ವೀಸಾ ಕೊಡೋಕೆ ನೀವು ಯಾರು? ಎಲ್ಲವನ್ನೂ ಕೇವಲ ವೋಟ್ ಬ್ಯಾಂಕ್ ದೃಷ್ಟಿಯಿಂದ ನೋಡಬೇಡಿ. ಜವಾಬ್ದಾರಿಯುತ ಜನಪ್ರತಿನಿಧಿಯಾಗಿ ವಿಚಾರಗಳ ಬಗ್ಗೆ ಮಾತನಾಡಿ ಎಂದು ಕುಟುಕಿದರು.
ಈ ದೇಶವನ್ನು ಮಾನವೀಯ ಧರ್ಮದ ಆಧಾರದ ಮೇಲೆ ಕಟ್ಟಲಾಗಿದೆ. ಅದನ್ನು ಉಳಿಸಿಕೊಳ್ಳಬೇಕು. ನೀವು ಹಿಜಾಬ್ ಬೇಡ ಎಂದರೆ, ನಾವು ಕುಂಕುಮ, ಹೂ ಬೇಡ ಎಂದು ಕೇಳಿದರೆ ಪರಿಸ್ಥಿತಿ ಏನಾಗುತ್ತದೆ? ಇದನ್ನು ಯೋಚನೆ ಮಾಡಿ. ಮಕ್ಕಳಲ್ಲಿ ವಿಷ ತುಂಬುವ ಕೆಲಸ ಮಾಡಬೇಡಿ ಎಂದು ಎಚ್ಚರಿಕೆ ನೀಡಿದರು.
ಪದವಿಪೂರ್ವ ಶಿಕ್ಷಣ ಇಲಾಖೆಯಲ್ಲಿ ಸಮವಸ್ತ್ರ ಕಡ್ಡಾಯವಿಲ್ಲ. ಕಡ್ಡಾಯ ಮಾಡಿದರೆ ಕ್ರಮ ಎಂಬ ನಿಯಮವೇ ಇದೆ. ಆದರೂ ಈ ವಿಚಾರ ಈಗ ವಿವಾದವಾಗುತ್ತಿದೆ. ರಾಜಕೀಯ ದುರುದ್ದೇಶದಿಂದ ಈ ಸೂಕ್ಷ್ಮ ವಿಚಾರವನ್ನು ವಿವಾದ ಮಾಡಲಾಗುತ್ತಿದೆ. ಬೆಕ್ಕಿಗೆ ಚೆಲ್ಲಾಟ, ಇಲಿಗೆ ಪ್ರಾಣ ಸಂಕಟ ಎಂಬಂತಹ ವರ್ತನೆಗಳು ಈಗ ಸಾಗಿವೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಇದನ್ನೂ ಓದಿ: ಸಿದ್ದರಾಮಯ್ಯ ಮುಂದಿನ ಚುನಾವಣೆಗಾಗಿ ಸಿದ್ದ'ರಹೀಮ್'ಯ್ಯ ಆಗುತ್ತಾರೆ : ಪ್ರತಾಪ್ ಸಿಂಹ
ಸರ್ಕಾರ ತಕ್ಷಣ ಈ ವಿಚಾರದ ಚರ್ಚೆಗೆ ಸಮಿತಿ ರಚಿಸಬೇಕು. ಸಮಿತಿಯಲ್ಲಿ ಈ ಬಗ್ಗೆ ಕೂಲಂಕಷವಾಗಿ ಚರ್ಚೆ ಮಾಡಿ ತೀರ್ಮಾನವಾಗಲಿ ಎಂದರು.