ಮೈಸೂರು: ಶಾಸಕ ಜಿ.ಟಿ. ದೇವೇಗೌಡ ಪ್ರಶ್ನಾತೀತ ನಾಯಕ, ಅವರು ನಮ್ಮ ಪಕ್ಷಕ್ಕೆ ಅಗತ್ಯ. ಅವರ ನೇತೃತ್ವದಲ್ಲಿ ಮುಂದಿನ ಚುನಾವಣೆ ಎದುರಿಸುತ್ತೇವೆ ಎಂದು ಶಾಸಕ ಸಾ.ರಾ. ಮಹೇಶ್ ಹೊಸ ಟ್ವಿಸ್ಟ್ ನೀಡಿದರು.
ತಮ್ಮ ಕಚೇರಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಶಾಸಕ ಜಿ.ಟಿ. ದೇವೇಗೌಡ ಹಾಗೂ ನನ್ನ ನಡುವೆ ಯಾವುದೇ ವೈಮನಸ್ಸಿಲ್ಲ. ನಾನು ಮೈಸೂರು ಹೈಕಮಾಂಡ್ ಅಲ್ಲ. ಪಕ್ಷದ ಹೈಕಮಾಂಡ್ ಹೇಳಿದಂತೆ ಕೇಳುವ ಕಾರ್ಯಕರ್ತ ನಾನು ಎಂದರು.
ಹೆಚ್.ಡಿ. ದೇವೇಗೌಡ, ಕುಮಾರಸ್ವಾಮಿ ಅವರಂತೆ ನಮ್ಮ ಪಕ್ಷದಲ್ಲಿಯೇ ಜಿ.ಟಿ. ದೇವೇಗೌಡ ಅವರೂ ಪ್ರಶ್ನಾತೀತ ನಾಯಕ. ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಮೈಸೂರು ಭಾಗದಲ್ಲಿ ಅವರೇ ನೇತೃತ್ವ ವಹಿಸಲಿದ್ದಾರೆ. ಜಿ.ಟಿ.ಡಿ ಹಾಗೂ ಅವರ ಪುತ್ರ ಹರೀಶ್ ಗೌಡನಿಗೂ ಪಕ್ಷದಿಂದಲೇ ಟಿಕೆಟ್ ಕೊಡಲಾಗುವುದು. ಅವರಿಬ್ಬರೂ ಬಯಸಿದ ಕ್ಷೇತ್ರದಿಂದಲೇ ಸ್ಪರ್ಧಿಸಲಿದ್ದಾರೆ ಎಂದು ಸ್ಪಷ್ಟಪಡಿಸಿದರು.
ಟಿಕೆಟ್ ತಪ್ಪಿಸಿದ್ದು ನಾನಲ್ಲ, 'ದುರಂತ ನಾಯಕ': ಕಳೆದ ವಿಧಾನ ಸಭಾ ಚುನಾವಣೆಯಲ್ಲಿ ಜಿಟಿಡಿ ಅವರ ಪುತ್ರನಿಗೆ ಹುಣಸೂರಿನಲ್ಲಿ ಟಿಕೆಟ್ ಕೈ ತಪ್ಪಲು ನಾನು ಕಾರಣನಲ್ಲ, 'ದುರಂತ ನಾಯಕ' ಎಂದು ವಿಶ್ವನಾಥ್ ಹೆಸರು ಹೇಳದೆ ಕುಟುಕಿದರು. ದುರಂತ ನಾಯಕನಿಗೆ ಲೋಕಸಭೆಗೆ ಟಿಕೆಟ್ ನೀಡಬೇಕು ಎಂಬ ಉದ್ದೇಶವಿತ್ತು. ಆದರೆ, ನಾನು ವಿಧಾನಸಭೆ ಟಿಕೆಟ್ ಕೊಡಿ. ಇದು ನನ್ನ ಕೊನೆಯ ಚುನಾವಣೆ ಎಂದಾಗ ಕುಮಾರಸ್ವಾಮಿ ಅವರು ಒತ್ತಡಕ್ಕೆ ಮಣಿದು ಟಿಕೆಟ್ ಕೊಟ್ಟರು ಎಂದರು.
ಜಿಟಿಡಿ ಹೆಸರು ಬಹಿರಂಗ ಪಡಿಸಲಿ: ಇನ್ನು ಕಳೆದ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಹಾಗೂ ಬಿಜೆಪಿಗೆ ಬೆಂಬಲ ನೀಡಿದವರ ಹೆಸರನ್ನು ಜಿಟಿಡಿ ಬಹಿರಂಗಪಡಿಸಿ, ಶಿಸ್ತು ಕ್ರಮಕ್ಕೆ ವರಿಷ್ಠರಿಗೆ ಸೂಚಿಸಲಿ ಎಂದರು.