ಮೈಸೂರು: ಪೌರತ್ವ ತಿದ್ದುಪಡಿ ಮಸೂದೆಯಿಂದ ಒಂದು ಧರ್ಮವನ್ನು ಹೊರಗಿಟ್ಟು ಕಾಯ್ದೆ ಜಾರಿಗೆ ತಂದಿರುವುದು ಒಳಿತಲ್ಲ ಎಂದು ಲೋಕಾಯುಕ್ತ ನಿವೃತ್ತ ನ್ಯಾಯಮೂರ್ತಿ ಸಂತೋಷ್ ಹೆಗ್ಡೆ ಬೇಸರ ವ್ಯಕ್ತಪಡಿಸಿದರು.
ಬೇರೆ ದೇಶದಲ್ಲಿ ಜೀವಿಸಲು ಸಾಧ್ಯವಾಗದಂತ ಜನರಿಗೆ ಆಶ್ರಯ ನೀಡುವುದು ನಮ್ಮ ಕಾನೂನಿನಲ್ಲಿ ಅವಕಾಶವಿದೆ. ಒಂದು ಜಾತಿ ಹಾಗೂ ಧರ್ಮವನ್ನು ಹೊರಗಿಟ್ಟು ಕಾನೂನು ರೂಪಿಸಬಾರದು. ಎಲ್ಲ ಧರ್ಮದವರಿಗೂ ನಮ್ಮ ದೇಶದಲ್ಲಿ ಜೀವಿಸಬಹುದು. ಈ ಕಾನೂನು ಜಾರಿಯಾಗುತ್ತಿದ್ದಂತೆ ದೇಶದ ಇತರೆ ಭಾಗಗಳಲ್ಲಿ ಹಿಂಸಾಚಾರ ಹೆಚ್ಚಾಗುತ್ತಿದ್ದು, ಕೇಂದ್ರ ಸರ್ಕಾರ ಮನಗಾಣಬೇಕಿದೆ ಎಂದರು. ಹೈದರಾಬಾದ್ನಲ್ಲಿ ನಡೆದ ಎನ್ಕೌಂಟರ್ ತನಿಖೆ ಹಂತದ ವೇಳೆಯೇ ನಡೆದಿರುವುದು ದುರದೃಷ್ಟಕರ. ಯಾರು ಸಹ ಕಾನೂನನ್ನು ಕೈಗೆತ್ತಿಕೊಳ್ಳಬಾರದು. ಎನ್ಕೌಂಟರ್ ಆದವರು ಅಪರಾಧಿಗಳೇ ಅಥವಾ ನಿರಪಾಧಿಗಳೇ ಎಂಬುದಕ್ಕೆ ತನಿಖೆ ನಡೆಯುವ ವೇಳೆಯೇ ಈ ಘಟನೆ ನಡೆಯಬಾರದಿತ್ತು ಎಂದು ಹೇಳಿದರು.
ಆಂಧ್ರ ಪ್ರದೇಶದಲ್ಲಿ ಅತ್ಯಾಚಾರಿಗಳಿಗೆ 21 ದಿನಗಳಲ್ಲಿ ಗಲ್ಲು ಶಿಕ್ಷೆ ನೀಡುವ 'ದಿಶಾ'ಕಾನೂನು ತರುತ್ತಿರುವುದು ಸರಿಯಾದ ಕ್ರಮವಲ್ಲ. 21 ದಿನದಲ್ಲಿ ಯಾವುದೇ ಪ್ರಕರಣ ತನಿಖೆ ನಡೆಸಲು ಸಾಧ್ಯವಿಲ್ಲ ಎಂದರು.