ಮೈಸೂರು: ಜನ್ ಧನ್ ಖಾತೆಯ ಮಹಿಳೆಯರಿಗೆ ಪ್ರಧಾನ ಮಂತ್ರಿ ಗರೀಬಿ ಕಲ್ಯಾಣ ಪ್ಯಾಕೇಜ್ ಅಡಿಯಲ್ಲಿ ನೀಡಲಾಗುತ್ತಿರುವ ಹಣವನ್ನು ಯಾವುದೇ ಬ್ಯಾಂಕ್‌ಗಳು ವಾಪಸ್ ಪಡೆಯುವುದಿಲ್ಲ. ಫಲಾನುಭವಿಗಳು ಆತಂಕವಿಲ್ಲದೇ ಸುರಕ್ಷತೆಗೆ ಮೊದಲ ಆದ್ಯತೆ ನೀಡಿ ಎಂದು ಲೀಡ್ ಬ್ಯಾಂಕ್ ಸಂದೇಶ ನೀಡಿದೆ.
ಕೊರೋನಾ ವೈರಸ್ನಿಂದ ಲಾಕ್ ಡೌನ್ ಎಫೆಕ್ಟ್ನಿಂದಾಗಿ ಜನ್ ಧನ್ ಯೋಜನೆ ಅಡಿಯಲ್ಲಿ ಮಹಿಳೆ ಖಾತೆದಾರರಿಗೆ ಪ್ರತಿ ತಿಂಗಳು ತಲಾ 500 ರೂಪಾಯಿಯಂತೆ ಮೂರು ತಿಂಗಳ ಕಾಲ ಹಣವನ್ನು ಅವರವರ ಖಾತೆಗಳಿಗೆ ಕೇಂದ್ರ ಸರ್ಕಾರ ಜಮೆ ಮಾಡಲಿದೆ. ಬ್ಯಾಂಕ್‌ಗಳಿಗೆ ಜಮೆಯಾಗಿರುವ ಹಣ ತೆಗೆದುಕೊಳ್ಳದೇ ಹೋದರೆ, ಕೇಂದ್ರ ಸರ್ಕಾರವೇ ಅದನ್ನು ವಾಪಸ್ ತೆಗೆದುಕೊಳ್ಳಲಿದೆ ಎಂಬುದು ಸುಳ್ಳುಸುದ್ದಿ. ಪ್ರತಿ ತಿಂಗಳು 500 ರೂಪಾಯಿ ಪಡೆಯಬಹುದು. ಅಥವಾ ಒಟ್ಟಿಗೆ ಮೂರು ತಿಂಗಳು ಸೇರಿ 1500 ರೂಪಾಯಿಯನ್ನು ಪಡೆದುಕೊಳ್ಳಬಹುದು. ನಿಮಗೆ ಬಿಡುವಾದಾಗ ಬ್ಯಾಂಕಿಗೆ ತೆರಳಿ ಹಣ ಪಡೆದುಕೊಳ್ಳಿ.
ಕೇಂದ್ರ ಸರ್ಕಾರ ಯಾವುದೇ ಕಾರಣಕ್ಕೂ ನೀಡಿದ ಹಣವನ್ನು ವಾಪಸ್ ಪಡೆಯುವುದಿಲ್ಲ. ಈ ಹಣ ಪಡೆಯಲು ಮಹಿಳೆಯರು ಬ್ಯಾಂಕಿನ ಬಳಿ ಸಾಮಾಜಿಕ ಅಂತರ ಕಾಯ್ದುಕೊಳ್ಳದೆ ಮುಗಿಬೀಳುವ ಅವಶ್ಯಕತೆಯಿಲ್ಲ. ಮೂರು ತಿಂಗಳ ನಂತರ ಕೂಡಾ ನಿಮ್ಮ ಹಣ ಸೇಫ್ ಆಗಿ ಇರುತ್ತದೆ. ಬಹಳ ಅವಶ್ಯಕತೆ ಇರುವವರಿಗೆ ಬ್ಯಾಂಕಿನವರೇ ಮನೆ ಬಾಗಿಲಿಗೆ ಬಂದು ಹಣ ನೀಡುತ್ತಾರೆ. ಅದಕ್ಕಾಗಿ ನೀವು ಬ್ಯಾಂಕಿಗೆ ಬರಬೇಕಾದ ಅವಶ್ಯಕತೆಯಿಲ್ಲ. ಈಗಾಗಲೇ ಜನರು ಜನ್ ಧನ್ ಹಣ ವಾಪಸ್ ಹೋಗುತ್ತೆ ಅಂತಾ ತಪ್ಪು ತಿಳಿದು ಬ್ಯಾಂಕ್‌ಗಳ ಮುಂದೆ ಸಾಲುಗಟ್ಟಿ ನಿಲ್ಲುತ್ತಿದ್ದಾರೆ. ಇದರಿಂದ ಸಾಮಾಜಿಕ ಅಂತರ ವ್ಯವಸ್ಥೆಯನ್ನು ಉಲ್ಲಂಘನೆ ಮಾಡಿದಂತಾಗುತ್ತದೆ.
ಮೈಸೂರಿನಲ್ಲಿ 91 ಸಾವಿರ ಜನ್ ಧನ್ ಖಾತೆದಾರರಿದ್ದು ಅದಕ್ಕಾಗಿ ಕೇಂದ್ರ ಸರ್ಕಾರ ಸುಮಾರು 5 ಕೋಟಿ ರೂಪಾಯಿ ಮೀಸಲಿಟ್ಟಿದೆ. ಖಾತೆ ಸ್ವಯಂಕೃತವಾಗಿ ಚಾಲ್ತಿಯಾಗಲಿದೆ, ಜನರು ಆತಂಕ ಪಡಬೇಕಿಲ್ಲ, ನಿಮ್ಮ ಮನೆ ಬಾಗಿಲಿಗೆ ಹಣ ತಲುಪಲಿದೆ ಎಂದು ಲೀಡ್ ಬ್ಯಾಂಕ್‌ನ ಮೈಸೂರು ಜಿಲ್ಲೆ ಮುಖ್ಯಸ್ಥ ವೆಂಕಟಾಚಲಪತಿ ಅವರು ಮನವಿ ಮಾಡಿದ್ಧಾರೆ. ಅಲ್ಲದೆ, ಜನರು ಹೀಗೆ ಒಟ್ಟೊಟ್ಟಿಗೆ ಸೇರುವುದರಿಂದ ಸಮಸ್ಯೆ ಹೆಚ್ಚಾಗುತ್ತದೆ. ಇದರಿಂದ ಕೊರೊನಾ ತಡೆಗಟ್ಟುವುದು ಸಾಧ್ಯವಿಲ್ಲ. ತೀರಾ ಅವಶ್ಯಕತೆ ಇದ್ದರೆ ಮಾತ್ರ ಬನ್ನಿ, ಇಲ್ಲವಾದಲ್ಲಿ ನಮ್ಮ ಸಿಬ್ಬಂದಿಗಳೇ ನಿಮ್ಮ ಮನೆ ಬಾಗಿಲಿಗೆ ಬರುತ್ತಾರೆ ಎಂದು ಹೇಳಿದರು.