ಮೈಸೂರು: ನಿರ್ಮಾಣಗೊಂಡ 6 ತಿಂಗಳಲ್ಲೇ ನಂಜನಗೂಡು ತಾಲೂಕಿನ ಚಾಮಲಾಪುರ ಹುಂಡಿಯ ಗ್ರಾಮದ ಬಳಿಯಿರುವ ಕಪಿಲಾ ನದಿಯ ಸೋಪಾನಕಟ್ಟೆ ಕುಸಿದಿದೆ.
ಕಪಿಲಾ ನದಿಯ ಸೋಪಾನಕಟ್ಟೆಯನ್ನು ಕಳೆದ 6 ತಿಂಗಳ ಹಿಂದೆಯಷ್ಟೇ 25 ಲಕ್ಷ ರೂ. ವೆಚ್ಚದಲ್ಲಿ ನಿರ್ಮಾಣ ಮಾಡಲಾಗಿತ್ತು. ಕಳಪೆ ಕಾಮಗಾರಿಯಿಂದಲೇ ಸೋಪಾನಕಟ್ಟೆ ಕುಸಿದಿದೆ. ಇದಕ್ಕೆ ನೀರಾವರಿ ಇಲಾಖೆ ಅಧಿಕಾರಿಗಳು ಹಾಗೂ ಗುತ್ತಿಗೆದಾರರೇ ಹೊಣೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.
ಈ ಕುರಿತು ಕಾಂಗ್ರೆಸ್ ಮುಖಂಡ ಶಂಕರ್ ಮಾತನಾಡಿ, 6 ತಿಂಗಳ ಹಿಂದೆಯಷ್ಟೇ ನಂಜನಗೂಡು ಶಾಸಕ ಹರ್ಷವರ್ಧನ್ ಈ ಕಾಮಗಾರಿ ನಿರ್ಮಾಣಕ್ಕೆ ಚಾಲನೆ ನೀಡಿದ್ದರು. ಚಾಮಲಾಪುರ ಹುಂಡಿ ಗ್ರಾಮದ ಜನರು ಉತ್ತಮ ರೀತಿಯಲ್ಲಿ ಕೆಲಸ ಕಾರ್ಯನಿರ್ವಹಿಸಲು ಸಲಹೆ ನೀಡಿದ್ದರು. ಸಾರ್ವಜನಿಕರ ತೆರಿಗೆ ಹಣದಲ್ಲಿ ನಿರ್ಮಾಣವಾಗಿರುವ ಸೋಪಾನಕಟ್ಟೆ ಕಳಪೆ ಕಾಮಗಾರಿಗೆ ನೀರಾವರಿ ಇಲಾಖೆ ಅಧಿಕಾರಿಗಳು ಮತ್ತು ಗುತ್ತಿಗೆದಾರರೇ ಹೊಣೆ.
ಹೀಗಾಗಿ ಈ ಕಾಮಗಾರಿ ಮಾಡಿದ ಗುತ್ತಿಗೆದಾರರನ್ನು ಕಪ್ಪುಪಟ್ಟಿಗೆ ಸೇರಿಸಿ ಕ್ರಮ ಕೈಗೊಳ್ಳಬೇಕು. ಇಲ್ಲವಾದರೆ ಸೋಪಾನಕಟ್ಟೆಯನ್ನು ಸರಿಪಡಿಸುವವರೆಗೂ ಹೋರಾಟ ಮಾಡಲಾಗುತ್ತದೆ ಎಂದು ನೀರಾವರಿ ಇಲಾಖೆ ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದರು.