ಮೈಸೂರು: 'ಕಿಡ್ನಿ ಮಾರಾಟದಲ್ಲಿ ಜೆಡಿಎಸ್ ಅಭ್ಯರ್ಥಿ ನಂಬರ್ 1' ಎಂಬ ಸಚಿವ ಎಸ್.ಟಿ. ಸೋಮಶೇಖರ್ ಆರೋಪಕ್ಕೆ ಜೆಡಿಎಸ್ ಅಭ್ಯರ್ಥಿ ಮಂಜೇಗೌಡ ಬಹಿರಂಗ ಪತ್ರದ ಮೂಲಕ ತಿರುಗೇಟು ನೀಡಿದ್ದಾರೆ. ಆರೋಪ ಸಾಬೀತಾದರೆ ರಾಜಕೀಯ ನಿವೃತ್ತಿ ಘೋಷಿಸಿ, ಪರಿಷತ್ ಚುನಾವಣಾ ಕಣದಿಂದ ಹಿಂದೆ ಸರಿಯುವುದಾಗಿ ತಿಳಿಸಿದ್ದಾರೆ.
ಉಸ್ತುವಾರಿ ಸಚಿವರು ಮಾಡಿರುವ ಆರೋಪಕ್ಕೆ ದಾಖಲೆ ನೀಡಿದರೆ, ಪರಿಷತ್ ಕಣದಿಂದ ಹಿಂದೆ ಸರಿಯುತ್ತೇನೆ. ಅಷ್ಟೇ ಅಲ್ಲ ರಾಜಕೀಯ ನಿವೃತ್ತಿ ಪಡೆಯುತ್ತೇನೆ ಎಂದು ಸವಾಲು ಹಾಕಿದ್ದಾರೆ.
'ಚುನಾವಣೆಯನ್ನು ಗೌರವಯುತವಾಗಿ ಎದುರಿಸಿ'
ಚುನಾವಣೆಯನ್ನು ಗೌರವಯುತವಾಗಿ ಎದುರಿಸಿ, ನೀವು ಮಾಡಿರುವ ಆರೋಪ ಸತ್ಯಕ್ಕೆ ದೂರವಾದದ್ದು. ಮಂತ್ರಿಮಂಡಲದಲ್ಲಿ ನೀವು ಬುದ್ಧಿವಂತರೆಂದು ಭಾವಿಸಿದ್ದೆ. ಆದರೆ, ಈ ರೀತಿಯ ದಡ್ಡತನದ ಹೇಳಿಕೆ ನಿಮಗೆ ಶೋಭೆ ತರುವಂತದ್ದಲ್ಲ. ನಾನೊಬ್ಬ ಸೈನಿಕ, ದೇಶವನ್ನು ಕಾದವನು. ಮತ್ತೊಬ್ಬರ ವೈಯಕ್ತಿಕ ವಿಚಾರ ಮಾತನಾಡುವವನಲ್ಲ. ಮೊದಲು ಮೈಸೂರು ಅಭಿವೃದ್ಧಿಯ ಬಗ್ಗೆ ಗಮನ ಹರಿಸಿ ಎಂದು ಮಂಜೇಗೌಡ ಸಚಿವ ಸೋಮಶೇಖರ್‌ಗೆ ಬಹಿರಂಗ ಪತ್ರದಲ್ಲಿ ತಿರುಗೇಟು ನೀಡಿದ್ದಾರೆ.
ಇದನ್ನೂ ಓದಿ: ಬೆಂಗಳೂರಲ್ಲಿ ಕಾಲೇಜಿನ 2ನೇ ಮಹಡಿಯಿಂದ ಹಾರಿ ವಿದ್ಯಾರ್ಥಿನಿ ಆತ್ಮಹತ್ಯೆ ಯತ್ನ