ಮೈಸೂರು: ಇಲ್ಲೊಂದು ಬಂಡೆ ಇದೆ. ಆ ಬಂಡೆ ಶತಮಾನದಿಂದ ಅಲುಗಾಡದೆ ನಿಂತಿದೆ. ಎಂತಹ ಪರಿಸ್ಥಿತಿ ಬಂದರೂ ಧೈರ್ಯದಿಂದ, ಸ್ಥಿರವಾಗಿರಬೇಕು ಎಂದು ಹಲವರಿಗೆ ಸ್ಪೂರ್ತಿ ತುಂಬುತ್ತಿದೆ ಈ ಏಕಬಂಡೆ.
ಮೈಸೂರು-ಹೆಚ್‌ಡಿಕೋಟೆ ಮುಖ್ಯರಸ್ತೆಯಲ್ಲಿರುವ ಹೆಮ್ಮರಗಾಲ ಗ್ರಾಮದ ಶಾಲೆಯ ಹಿಂಭಾಗದಲ್ಲಿ ದೊಡ್ಡ ಏಕಬಂಡೆ ಇದೆ. ಮೈಸೂರಿಂದ ಹೆಚ್‌ಡಿಕೋಟೆವರೆಗೆ ಪ್ರಯಾಣ ಬೆಳೆಸುವ ಪ್ರವಾಸಿಗರಿಗೆ ಇದು ಕುತೂಹಲ ಮೂಡಿಸುತ್ತಿದೆ. ಬಂಡೆಯ ಕೆಳಗೆ ಶಾಲೆ ಇದೆ. ಅಲ್ಲದೇ ಮುಖ್ಯ ರಸ್ತೆ ಕೂಡ ಇದೆ. ಒಂದು ವೇಳೆ ಉರುಳಿ ಬಿದ್ದರೆ ಏನು ಗತಿ ಎಂಬ ಪ್ರಶ್ನೆ ಕೂಡಾ ಪ್ರವಾಸಿಗರನ್ನು ಕಾಡುತ್ತಿದೆ. ಶತಮಾನದಿಂದ ಗಟ್ಟಿಯಾಗಿ ನಿಂತಿರುವ ಈ ಬಂಡೆ ಗಾಳಿ-ಮಳೆಗೂ ಬಗ್ಗದೆ ತನ್ನ ಗಟ್ಟಿತನದಿಂದ ಅವುಗಳಿಗೆ ಸವಾಲು ಹಾಕಿ ಗೆಲುವು ಕಾಣುತ್ತಿದೆ.
ಏಕಬಂಡೆ ವಿಶೇಷವೇನು...
ಮೈಸೂರು ಮಹಾರಾಜರು ಶಿಕಾರಿಗಾಗಿ ಹೆಚ್‌ಡಿಕೋಟೆ ಅರಣ್ಯ ಪ್ರದೇಶಕ್ಕೆ ಹೋಗುವಾಗ ಈ ಹೆಮ್ಮರಗಾಲದ ಕಿರು ಅರಣ್ಯ ಪ್ರದೇಶದಲ್ಲಿ ಕೆಲವೊಮ್ಮೆ ವಿಶ್ರಾಂತಿ ಪಡೆದು ಅಥವಾ ಕಾಡಿನೊಳಗೆ ಯಾವ ದಿಕ್ಕಿನಿಂದ ಹೋಗಬೇಕೆಂದು ಏಕಬಂಡೆಯ ಮೇಲೆ ಕುಳಿತು ಆಲೋಚಿಸಿ ಮುಂದಿನ ದಾರಿ ನೋಡುತ್ತಿದ್ದರು ಎಂಬ ಪ್ರತೀತಿ ಇದೆ.
ಶತಮಾನದ ಹಿಂದಿನ ಏಕಬಂಡೆ ಎಂದು ಕರೆಯುವ ಬಂಡೆಯನ್ನು ಮಳೆ-ಬಿರುಗಾಳಿಯಿಂದ ಬೀಳುತ್ತದೆ ಎಂಬ ಆಲೋಚನೆಯಿಂದ ಗ್ರಾಮಸ್ಥರು ತೆರವುಗೊಳಿಸುವ ಚಿಂತನೆ ನಡೆಸಿದರು. ದೇವರ ಕೃಪೆ ಈ ಬಂಡೆಗೆ ಇದೆ ಎಂದು ಉಳಿಸುವಂತೆ ಹಿರಿಯರು ಸೂಚಿಸಿದ ಹಿನ್ನೆಲೆಯಲ್ಲಿ ಏಕಬಂಡೆ ಉಳಿದುಕೊಂಡಿದೆ. ಅಂದಿನಿಂದಲೂ ಯಾವುದೇ ಅಪಾಯವಾಗಿಲ್ಲ.