ಮೈಸೂರು: ಸ್ನೇಹಿತರೊಂದಿಗೆ ಬಾಜಿ ಕಟ್ಟಿ ಸಾಹಸ ಪ್ರದರ್ಶಿಲು ಕಪಿಲಾ ನದಿಗೆ ಧುಮುಕಿ ನಾಪತ್ತೆಯಾಗಿದ್ದ ಅರ್ಚಕರೊಬ್ಬರು 57 ಗಂಟೆಗಳ ಕಾಲ ನೀರಿನೊಳಗಿನ ಸೇತುವೆಯಲ್ಲಿ ಕುಳಿತು ಪವಾಡ ಸದೃಶ ರೀತಿಯಲ್ಲಿ ಬದುಕಿ ಬಂದಿರುವುದು ರೋಚಕವೇ ಸರಿ.
ಅಂದು ನಾನು ಸೇತುವೆ ಮೇಲಿಂದ ಬಿದ್ದಾಗ ನೀರಿನೊಳಗೆ ಹೋಗಿಬಿಟ್ಟೆ. ಫೈಬರ್ ಡಬ್ಬಗಳನ್ನು ಸೇತುವೆ ಕೆಳಗಿವೆ. ಅವುಗಳಿಂದ ತಪ್ಪಿಸಿಕೊಳ್ಳುವ ಸಂದರ್ಭದಲ್ಲಿ ನೀರು ಡಬ್ಬದೊಳಗೆ ಎಳೆದುಕೊಂಡಿತು. ಧೈರ್ಯದಿಂದ ಹೊರಬಂದೆ. ಹಾಗೆಯೇ ಮುಂದೆ ಈಜಿದೆ. ಅಲ್ಲಿ ಹೈರಿಗೆ ಜಾಗದಲ್ಲಿದ್ದ ಸೇತುವೆ ಕಾಣಿಸಿತು. ಏನಾದರೂ ಆ ಸಂದರ್ಭದಲ್ಲಿ ನೀರು ಕುಡಿದಿದ್ದರೆ ಬದುಕುಳಿಯುವುದು ಕಷ್ಟವಾಗುತಿತ್ತು ಎಂದರು.
ಸೇತುವೆ ಕೆಳಗೆ ನಿರ್ಮಿಸಿದ್ದ ಕಂಬದಲ್ಲಿ ಚಿಕ್ಕ ಕಟ್ಟೆ ಇತ್ತು. ನೀರಿನ ನಡುವೆ ಕಟ್ಟೆಯಲ್ಲಿಯೇ ಕುಳಿತು 57 ಗಂಟೆ ಕಳೆದೆ. ಯಾರಾದರೂ ಕಾಪಾಡುತ್ತಾರೆ ಎಂದು ಯೋಚಿಸಿದ್ದರೆ ಆ ಭಯದಲ್ಲೇ ಸತ್ತು ಹೋಗುತ್ತಿದ್ದೆ. ಕುಟುಂಬ ನೆನಪಾಗಲಿಲ್ಲ. ನೀರು ಕಡಿಮೆಯಾದ ಬಳಿಕ ಹೋದರಾಯ್ತು ಎಂದುಕೊಂಡೆ. ಆದರೆ, ಹಸಿವು ಜಾಸ್ತಿ ಆಯ್ತು. ಹತ್ತಿರದಲ್ಲಿ ನೀರಿನಲ್ಲಿ ಮಕ್ಕಳು ಆಟ ಆಡುತ್ತಿರುವುದನ್ನು ಕಂಡೆ. ನೀರಿನ ಹರಿವು ಕಡಿಮೆ ಆಯ್ತು. ಹಸಿವು ಜಾಸ್ತಿ ಆಯ್ತು. ಅಲ್ಲಿಂದ ಮುಂದೆ ಅಯ್ಯಪ್ಪ ಸ್ವಾಮಿ ದೇವಸ್ಥಾನದ ಹತ್ತಿರ ನೀರಿನಿಂದ ಹೊರ ಬಂದು ಎಳನೀರು ಕುಡಿದೆ ಎಂದು ಅಲ್ಲಿದ್ದ ಕಷ್ಟದ ಸಮಯವನ್ನು ಹೇಳಿ ಸ್ಮರಿಸಿಕೊಂಡರು.
ಅವರ ಮಾತುಗಳಲ್ಲಿ ನೀರಿನಲ್ಲಿದ್ದ ಆತಂಕ, ಆಯಾಸ ಕಾಣುತ್ತಿತ್ತು. ಈ ಹಿಂದೆ ಇದೇ ನದಿಯಲ್ಲಿ ಹಲವಾರು ಸಾಹಸ ಮಾಡಿದ್ದೇನೆ. ಉತ್ಸಾಹವೇ ಬೇರೆ, ಸಾಹಸವೇ ಬೇರೆ. ಆಗದಿರುವ ಕೆಲಸ ಮಾಡಲು ಹೋಗಿ ಸಾಯುತ್ತಾರಲ್ಲ ಅದು ಉತ್ಸಾಹ. ಯುವಕರು ಹೆಚ್ಚು ಇಂತಹ ಹುಚ್ಚು ಸಾಹಸಗಳಿಗೆ ಕೈ ಹಾಕುತ್ತಾರೆ. ಯಾರೂ ಸಾಹಸ ಮಾಡುತ್ತೇನೆ ಎಂದು ಮುಂದಾಗಬೇಡಿ ಅಂತಾ ಸಲಹೆ ನೀಡಿದರು.