ಮೈಸೂರು: ನಂಜನಗೂಡು ತಾಲೂಕಿನ ಕಾಂಗ್ರೆಸ್ ಕಚೇರಿಗೆ ಮಾಜಿ ಸಚಿವ ಡಾ.ಎಚ್.ಸಿ.ಮಹದೇವಪ್ಪ ಅವರು ನಾಲ್ಕು ವರ್ಷದ ನಂತರ ಎಂಟ್ರಿ ಕೊಟ್ಟಿರುವುದು ಅಚ್ಚರಿ ಮೂಡಿಸಿದೆ.
ಕಳೆದ ವಿಧಾನಸಭಾ ಚುನಾವಣೆಯಲ್ಲಿ ಸೋತ ನಂತರ ಮುನಿಸಿಕೊಂಡು ರಾಜಕೀಯ ಚಟುವಟಿಕೆಯಿಂದ ದೂರ ಉಳಿದಿದ್ದ ಮಹದೇವಪ್ಪ, ಇತ್ತೀಚೆಗೆ ನಿಧಾನವಾಗಿ ಕಾರ್ಯಕರ್ತರೊಂದಿಗೆ ಬೆರೆಯಲು ಮುಂದಾಗಿದ್ದಾರೆ.
ಪುತ್ರನಿಗೆ ಟಿಕೆಟ್ ಕೊಡಿಸುವ ವಿಚಾರದಲ್ಲಿ ಧ್ರುವನಾರಾಯಣ್ ಅವರೊಂದಿಗೆ ಕೂಡ ಮುನಿಸಿಕೊಂಡಿದ್ದ ಮಹದೇವಪ್ಪ, ಇದೀಗ ಸೋಲಿನ ಕಹಿ ಮರೆತು ಕಾರ್ಯಕರ್ತರೊಂದಿಗೆ ಬೆರೆಯುತ್ತಿದ್ದಾರೆ. 4 ವರ್ಷಗಳ ನಂತರ ಕಾಂಗ್ರೆಸ್ ಕಚೇರಿಗೆ ಭೇಟಿ ನೀಡಿದ ಮಾಜಿ ಸಚಿವ, ಪಕ್ಷದ ಬಲವರ್ಧನೆ ಬಗ್ಗೆ ಟೀಚ್ ಮಾಡಿದ್ದಾರೆ.
ಎಚ್.ಸಿ ಮಹದೇವಪ್ಪ ಅವರನ್ನು ಪಕ್ಷದ ಕಚೇರಿಗೆ ಮಾಜಿ ಶಾಸಕ ಕಳಲೆ ಕೇಶವಮೂರ್ತಿ ಬರಮಾಡಿಕೊಂಡಿದ್ದಾರೆ. ನಂಜನಗೂಡು ಕಾಂಗ್ರೆಸ್ ಕಚೇರಿಗೆ ಆಗಮಿಸಿದ ಎಚ್.ಸಿ.ಮಹದೇವಪ್ಪ ಅವರನ್ನು ಕಾರ್ಯಕರ್ತರು ಅದ್ಧೂರಿಯಾಗಿ ಸ್ವಾಗತಿಸಿ, ಬೃಹತ್ ಗಾತ್ರದ ಹೂವಿನ ಹಾರ ಹಾಕಿ ಅಭಿನಂದಿಸಿದರು.