ಮೈಸೂರು: ಕಾಂಗ್ರೆಸ್ ಹಾಗೂ ಜೆಡಿಎಸ್ ನಾಯಕರು ಒಟ್ಟಾಗಿ ಸೇರಿಕೊಂಡರು. ನನ್ನನ್ನು ಸೋಲಿಸಲು ಕೆಲ ಬಿಜೆಪಿ ನಾಯಕರೂ ಸೇರಿಕೊಂಡರು. ಇದೆಲ್ಲವನ್ನೂ ಅನಿವಾರ್ಯವಾಗಿ ಹೇಳಲೇಬೇಕಿದೆ ಎಂದು ಹುಣಸೂರು ಉಪಚುನಾವಣೆ ಬಿಜೆಪಿ ಪರಾಜಿತ ಅಭ್ಯರ್ಥಿ ಹೆಚ್.ವಿಶ್ವನಾಥ್ ಗಂಭೀರ ಆರೋಪ ಮಾಡಿದ್ದಾರೆ.
ಹುಣಸೂರು ಪಟ್ಟಣದ ಕಲ್ಯಾಣಮಂಟಪವೊಂದರಲ್ಲಿ ಕೃತಜ್ಞತೆ ಸಭೆಯಲ್ಲಿ ಮಾತನಾಡಿದ ಅವರು, ನನ್ನನ್ನು ಮಾರಿಕೊಂಡವನು ಎನ್ನುತ್ತೀರಿ. ಪಾಪ, ಜೆಡಿಎಸ್ ಅಭ್ಯರ್ಥಿ ಸೋಮಶೇಖರ್ ಅವರನ್ನು ಕಾಂಗ್ರೆಸ್‌ಗೆ ಮಾರಾಟ ಮಾಡಿದವರು ಯಾರು? ಸೋಮಶೇಖರ್ ತನ್ನ ಮನೆ ದುಡ್ಡು ತಂದು ಚುನಾವಣೆ ಮಾಡಿದ. ಅವನನ್ನು ಕಾಂಗ್ರೆಸ್‌ಗೆ ಮಾರಾಟ ಮಾಡಿದರು. ನನ್ನನ್ನು ನಾನು ಮಾರಿಕೊಂಡಿಲ್ಲ. ಇವತ್ತಿಗೂ ವಿಶ್ವನಾಥ್ ಶುದ್ಧವಾಗಿದ್ದಾನೆ. ಕರ್ನಾಟಕವನ್ನು ಮಾರಾಟ ಮಾಡುವವರನ್ನು ಕಿತ್ತೊಗೆಯಲು ರಾಜೀನಾಮೆ ನೀಡಿದೆವು. ನೀವು ರಾಜ್ಯ ಮಾರಿದ್ದೀರಿ, ಜಾತಿಯನ್ನೂ ಮಾರಿದ್ದೀರಿ. ಒಕ್ಕಲಿಗ ವಿರೋಧಿ ನಾನೋ, ನೀವೋ ಈಗ ಹೇಳಿ ಎಂದು ಜೆಡಿಎಸ್ ನಾಯಕರ ವಿರುದ್ಧ ಕಿಡಿಕಾರಿದರು.
ಹೆಚ್.ಡಿ.ರೇವಣ್ಣ 700 ಎಂಜಿನಿಯರ್‌ಗಳನ್ನು ಅಕ್ರಮವಾಗಿ ನೇಮಿಸಲು ಮುಂದಾಗಿದ್ದರು. 1750 ಎಂಜಿನಿಯರ್‌ಗಳ ವರ್ಗಾವಣೆ ಮಾಡಲು ಸಿದ್ಧತೆ ನಡೆದಿತ್ತು. ಮೈಮುಲ್‌ನಲ್ಲಿರುವ 170 ಸೀಟುಗಳನ್ನು ತಲಾ 50 ಲಕ್ಷ ರೂ.ಗಳಿಗೆ ಮಾರಾಟ ಮಾಡುತ್ತಿದ್ದರು ಎಂದು ಆರೋಪಿಸಿದ ವಿಶ್ವನಾಥ್, ಇದನ್ನೆಲ್ಲ ತಪ್ಪಿಸುವ ಸಲುವಾಗಿ ನಾವು ರಾಜೀನಾಮೆ ನೀಡಿದೆವು ಎಂದು ಹೇಳಿದರು.
ನಾನು ಸೋತಿರಬಹುದು, ಆದರೆ ನೊಂದುಕೊಳ್ಳಬೇಕಿಲ್ಲ. ಕೇಂದ್ರದಲ್ಲಿ ನರೇಂದ್ರ ಮೋದಿ, ರಾಜ್ಯದಲ್ಲಿ ಬಿ.ಎಸ್.ಯಡಿಯೂರಪ್ಪ ನೇತೃತ್ವದ ಸರ್ಕಾರ ಇದೆ. ಅಭಿವೃದ್ಧಿಗೆ ಬೇಕಾದ ಕೆಲಸ ಮಾಡೋಣ. ಜನತಂತ್ರದಲ್ಲಿ ದ್ವನಿಗೆ ವಿಶೇಷ ಸ್ಥಾನವಿದೆ. ಗೆದ್ದವರು ಸೋತವರ ಧ್ವನಿ ಅಡಗಿಸಲು ಅವಕಾಶ ಇಲ್ಲ. ನಮ್ಮ ಧ್ವನಿ ಅಡಗಿಸಲು ಯಾರಿಂದಲೂ ಸಾಧ್ಯವಿಲ್ಲ ಎಂದರು.