ಮೈಸೂರು: ಎಸಿಬಿಯನ್ನು ರದ್ಧುಗೊಳಿಸಿ ಲೋಕಾಯುಕ್ತಕ್ಕೆ ಮಾನ್ಯತೆ ನೀಡಿರುವ ನ್ಯಾಯಾಲಯದ ಆದೇಶವನ್ನು ಸ್ವಾಗತಿಸಿರುವ ವಿಧಾನ ಪರಿಷತ್ ಸದಸ್ಯ ಹೆಚ್ ವಿಶ್ವನಾಥ್, ಹೈಕೋರ್ಟ್ ಎಸಿಬಿಯನ್ನು ರದ್ದು ಮಾಡಿರುವ ಬಗ್ಗೆ ಮೂರು ರಾಜಕೀಯ ಪಕ್ಷಗಳ ಪ್ರತಿಕ್ರಿಯೆ ನೋಡಿದರೆ, ಈ ವಿಚಾರದಲ್ಲಿ ಮೂರೂ ರಾಜಕೀಯ ಪಕ್ಷಗಳು ಬೆತ್ತಲಾಗಿವೆ ಎಂದರು.
ಹೈಕೋರ್ಟ್ ಎಸಿಬಿಯನ್ನು ರದ್ಧು ಮಾಡಿ ಲೋಕಾಯುಕ್ತಕ್ಕೆ ಎಲ್ಲಾ ಕೇಸ್ಗಳನ್ನು ವರ್ಗಾವಣೆ ಮಾಡುವಂತೆ ನೀಡಿದ ತೀರ್ಪು ಸ್ವಾಗತಾರ್ಹ. ಈ ವಿಚಾರದಲ್ಲಿ ರಾಜ್ಯದ ಮುಖ್ಯಮಂತ್ರಿ ಏನೂ ಗೊತ್ತಿಲ್ಲವೆಂದು ಹೇಳಿದ್ದಾರೆ. ಮತ್ತೊಂದೆಡೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಎಸಿಬಿ ರದ್ದತಿ ಸ್ವಾಗತಾರ್ಹ ಎಂದಿದ್ದಾರೆ. ಹಾಗೆಯೇ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಎಸಿಬಿ ರದ್ಧತಿಯಿಂದ ಭ್ರಷ್ಟಾಚಾರ ಕಡಿಮೆಯಾಗುತ್ತದೆ ಎಂಬ ವಿಶ್ವಾಸ ಇಲ್ಲ ಎಂಬ ಹೇಳಿಕೆ ನೀಡಿದ್ದಾರೆ. ಇದನ್ನೆಲ್ಲಾ ನೋಡಿದರೆ ಮೂರು ಪಕ್ಷಗಳು ಬೆತ್ತಲಾದಂತೆ ಕಾಣುತ್ತಿದೆ ಎಂದರು.
ಲೋಕಾಯುಕ್ತಕ್ಕೆ ಕೇವಲ ಮಾನ್ಯತೆ ಕೊಟ್ಟಿರುವುದು ಪೂರ್ಣ ಸಮಾಧಾನ ತಂದಿಲ್ಲ. ಲೋಕಾಯುಕ್ತವನ್ನು ಪರಿಣಾಮಕಾರಿಯಾಗಿ ಕೆಲಸ ಮಾಡಲು ದಕ್ಷ ಅಧಿಕಾರಿಗಳನ್ನು ನೇಮಿಸಬೇಕು. ಈಗ ಲೋಕಾಯುಕ್ತದಲ್ಲಿ ಎಲ್ಲೂ ಹುದ್ದೆ ಅಲಂಕರಿಸದ ಅಧಿಕಾರಿಗಳಿದ್ದು, ಅವರನ್ನು ಬದಲಾಯಿಸಬೇಕು. ಆ ಮೂಲಕ ದಕ್ಷ ಅಧಿಕಾರಿಗಳನ್ನು ನೇಮಿಸಬೇಕು ಎಂದು ಸಾರಾ ಮಹೇಶ್ ಹೇಳಿದರು.
ರೋಹಿಣಿ ಸಿಂಧೂರಿ ವಿರುದ್ಧ ಮತ್ತಷ್ಟು ದಾಖಲೆ: ರೋಹಿಣಿ ಸಿಂಧೂರಿ ಮೈಸೂರು ಜಿಲ್ಲಾಧಿಕಾರಿ ಆಗಿದ್ದಾಗ ಕಾನೂನು ಬಾಹಿರವಾಗಿ ಪಾರಂಪರಿಕ ಕಟ್ಟಡದಲ್ಲಿ ಈಜುಕೊಳ ನಿರ್ಮಾಣ, ಬಟ್ಟೆ ಬ್ಯಾಗ್ ಹಗರಣದ ಬಗ್ಗೆ ಅವರ ವಿರುದ್ಧ 5 ಪ್ರತ್ಯೇಕ ದೂರುಗಳನ್ನು ದಾಖಲಿಸಲಾಗಿದೆ. ಈ ಬಗ್ಗೆ ಆಗಸ್ಟ್ 19 ರಂದು ಮೈಸೂರು ಜಿಲ್ಲಾಧಿಕಾರಿ ಕಚೇರಿಗೆ ತನಿಖಾಧಿಕಾರಿಗಳು ಬರುತ್ತಿದ್ದು, ಅವರಿಗೆ ಅಲ್ಲಿ ಮತ್ತಷ್ಟು ದಾಖಲೆಗಳನ್ನು ಕೊಡುತ್ತೇವೆ. ಚಾಮರಾಜನಗರ ಆಕ್ಸಿಜನ್ ದುರಂತಕ್ಕೆ ಅವರೇ ನೇರ ಕಾರಣ. ಈ ಬಗ್ಗೆ 15 ಪುಟದ ವರದಿ ನೀಡಿದ್ದು, ಅದನ್ನೂ ಸಹ ತನಿಖಾಧಿಕಾರಿಗಳಿಗೆ ಕೊಡುತ್ತೇವೆ. ಎಲ್ಲಾ ಕಾರಣಗಳಿಂದ ಈ ಹೊತ್ತಿಗೆ ರೋಹಿಣಿ ಸಿಂಧೂರಿ ಸಸ್ಪೆಂಡ್ ಆಗಬೇಕಿತ್ತು. ತನಿಖೆ ಸ್ವಲ್ಪ ತಡವಾದರೂ ನ್ಯಾಯ ಸಿಗಲಿದೆ ಎಂದು ವಾಗ್ದಾಳಿ ನಡೆಸಿದರು.
ಇದನ್ನೂ ಓದಿ : ಬಿಎಸ್ವೈ ಭೇಟಿಯಾದ ಬೊಮ್ಮಾಯಿ: ಲೋಕಾಯುಕ್ತ ಬಲವರ್ಧನೆ ಕುರಿತು ನಡೀತಾ ಚರ್ಚೆ?