ಮೈಸೂರು: ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ ಅವರನ್ನು ಮಾಜಿ ಸಚಿವ ಹೆಚ್.ವಿಶ್ವನಾಥ್ ದಿಢೀರ್ ಭೇಟಿಯಾಗಿ ರಾಜಕೀಯ ವಿದ್ಯಮಾನಗಳ ಕುರಿತು ಚರ್ಚೆ ನಡೆಸಿದರು.
ಜಿಲ್ಲಾಧಿಕಾರಿ ಕಚೇರಿಯ ಸಭಾಂಗಣದಲ್ಲಿ ವಿವಿಧ ಇಲಾಖೆಯ ಅಧಿಕಾರಿಗಳೊಂದಿಗೆ ಡಿಸಿಎಂ ಅವರು ಸಭೆ ನಡೆಸುತ್ತಿದ್ದ ವೇಳೆ ಅಲ್ಲಿಗೆ ದಿಢೀರಾಗಿ ಭೇಟಿ ಹೆಚ್.ವಿಶ್ವನಾಥ್ ಬಂದರು. ಅವರು ಬಂದ ವಿಷಯ ತಿಳಿದು ಸಭೆಯಿಂದ ಆತುರಾತುರಾಗಿ ಜಿಲ್ಲಾಧಿಕಾರಿ ಕೊಠಡಿಗೆ ತೆರಳಿ ಡಿಸಿಎಂ ಕಾರಜೋಳ, ಹೆಚ್. ವಿಶ್ವನಾಥ್ ಅವರನ್ನ ಭೇಟಿ ಮಾಡಿ ಮಾತನಾಡಿಸಿದರು. ನಂತರ ಸಮಯದ ಅಭಾವದಿಂದ ಸುದೀರ್ಘವಾಗಿ ಮಾತನಾಡದೇ ಹೆಚ್. ವಿಶ್ವನಾಥ್ ಅವರು ಅಲ್ಲಿಂದ ಹೊರಟರೆ, ಗೋವಿಂದ ಕಾರಜೋಳ ಅವರು ಮತ್ತೆ ಸಭೆಗೆ ಬಂದರು.
ಬಿಜೆಪಿ ವಲಯದಲ್ಲಿ ಉಪಚುನಾವಣೆಯಲ್ಲಿ ಗೆದ್ದಿರುವ ಹಾಗೂ ಸೋತಿರುವ ಅಭ್ಯರ್ಥಿಗಳಿಗೆ ಯಾರಿಗೆ ಸಚಿವ ಸ್ಥಾನ ಸಿಗಲಿದೆ ಎಂಬುದು ಕುತೂಹಲವಾಗಿದೆ. ಮುಖ್ಯಮಂತ್ರಿ ಯಡಿಯೂರಪ್ಪ ಅವರು ದಾವೋಸ್ ಪ್ರವಾಸದಲ್ಲಿದ್ದಾರೆ. ಅವರು ವಾಪಸ್ ರಾಜ್ಯಕ್ಕೆ ಬಂದಾಗ ಈ ಎಲ್ಲ ಕುತೂಹಲಕ್ಕೆ ತೆರೆ ಬೀಳುವ ಸಾಧ್ಯತೆಯಿದೆ.