ಮೈಸೂರು: ಕೊರೊನಾದಿಂದ ತತ್ತರಿಸಿ ಹೋಗಿರುವ ಕಟ್ಟಡ ಕಾರ್ಮಿಕರಿಗೆ ನೆರವಾಗುವ ನಿಟ್ಟಿನಲ್ಲಿ ರಾಜ್ಯಾದ್ಯಂತ ಸಂಚರಿಸಲು ಉಚಿತ ಬಸ್ ಪಾಸ್ ನೀಡಲಾಗುವುದು ಎಂದು ಕೆಎಸ್ಆರ್ಟಿಸಿ ಅಧ್ಯಕ್ಷ ಚಂದ್ರಪ್ಪ ತಿಳಿಸಿದ್ದಾರೆ.
ಗ್ರಾಮಾಂತರ ವಿಭಾಗದ ಕಚೇರಿಯಲ್ಲಿ ಮಾಧ್ಯಮದಗೋಷ್ಟಿಯಲ್ಲಿ ಮಾತನಾಡಿದ ಅವರು, ಮೈಸೂರು ಜಿಲ್ಲೆಯಲ್ಲಿ 60,600 ಕಟ್ಟಡ ಕಾರ್ಮಿಕರಿಗೆ ಪ್ರಾಯೋಗಿಕವಾಗಿ ಈ ಯೋಜನೆ ಅನುಷ್ಠಾನಗೊಳಿಸಲಾಗುತ್ತದೆ. ನಂತರದ ದಿನಗಳಲ್ಲಿ ಪ್ರತಿ ಜಿಲ್ಲೆಯ ಕಾರ್ಮಿಕ ಇಲಾಖೆಯ ಅಧಿಕಾರಿಗಳೊಡನೆ ಸಮಾಲೋಚನೆ ನಡೆಸಿ, ರಾಜ್ಯದ ಎಲ್ಲ ಜಿಲ್ಲೆಗಳಿಗೂ ವಿಸ್ತರಿಸಲಾಗುವುದು. ಇದರಿಂದ ಜಿಲ್ಲೆಯಿಂದ ಜಿಲ್ಲೆಗೆ ಕೂಲಿ ಕಾರ್ಮಿಕರು ಪ್ರಯಾಣ ಬೆಳೆಸಲು ಅನುಕೂಲವಾಗಲಿದೆ. ಕೊರೊನಾದಿಂದ ರಾಜ್ಯ ಸಾರಿಗೆ ಇಲಾಖೆಗೆ 1,600 ಕೋಟಿ ರೂ. ನಷ್ಟ ಉಂಟಾಗಿದೆ. ರಾಜ್ಯ ಸರ್ಕಾರ 1,385 ಕೋಟಿ ರೂ. ನೀಡುವ ಮೂಲಕ ನೌಕರರಿಗೆ ಸಂಬಳದ ತೊಂದರೆಯಾಗದಂತೆ ನೋಡಿಕೊಂಡಿದೆ ಎಂದರು.
ಕೊರೊನಾ ಸಂದರ್ಭದಲ್ಲಿ ಮೈಸೂರು ನಗರ ಹಾಗೂ ಮೈಸೂರು ಗ್ರಾಮಾಂತರ ವಿಭಾಗಗಳಿಂದ 70 ಕೋಟಿ ರೂ. ನಷ್ಟ ಉಂಟಾಗಿದೆ. ಈ ಎರಡು ವಿಭಾಗಗಳನ್ನು ಒಂದು ಗೂಡಿಸಬೇಕು ಎಂಬ ಚಿಂತನೆ ಮಾಡಲಾಗಿದ್ದು, ಇದರಿಂದ ನಷ್ಟ ಕೂಡ ಸ್ವಲ್ಪ ಕಡಿಮೆಯಾಗಲಿದೆ ಎಂದು ಚಂದ್ರಪ್ಪ ಅಭಿಪ್ರಾಯಪಟ್ಟರು.