ಮೈಸೂರು: ಕೋಳಿ ಫಾರಂವೊಂದಕ್ಕೆ ನುಗ್ಗಿದ ಚಿರತೆಯನ್ನು ಅರಣ್ಯ ಇಲಾಖೆ ಸಿಬ್ಬಂದಿ ಸೆರೆಹಿಡಿದ ಘಟನೆ ಮೈಸೂರು ತಾಲೂಕಿನ ಜಯಪುರದಲ್ಲಿ ನಡೆದಿದೆ.
ಜಯಪುರ ಗ್ರಾಮದಲ್ಲಿ ಗುಜ್ಜೇಗೌಡ ಎಂಬುವರ ಕೋಳಿ ಫಾರಂಗೆ ಚಿರತೆ ನುಗ್ಗಿ ಕೋಳಿ ತಿನ್ನಲು ಮುಂದಾಗಿದ್ದನ್ನು ಗಮನಿಸಿದ ಸ್ಥಳೀಯರು, ಕಾರ್ಮಿಕರಿಗೆ ತಿಳಿಸಿದ್ದಾರೆ. ಕೂಡಲೇ ಜಾಗೃತರಾದ ಕಾರ್ಮಿಕರು, ಸ್ಥಳೀಯರ ಸಹಕಾರದಿಂದ ಚಿರತೆಯನ್ನು ಕೂಡಿ ಹಾಕಿ, ಅರಣ್ಯ ಇಲಾಖೆ ಹಾಗೂ ಪೊಲೀಸರಿಗೆ ತಿಳಿಸಿದ್ದಾರೆ.
ಇದನ್ನೂ ಓದಿ: ವಿಡಿಯೋ: ಮೊಲ ನುಂಗಿ ಪ್ರಾಣ ಸಂಕಟದಿಂದ ಒದ್ದಾಡಿದ ಹೆಬ್ಬಾವು
ಸ್ಥಳಕ್ಕಾಗಮಿಸಿ ಪರಿಶೀಲನೆ ನಡೆಸಿದ ಪೊಲೀಸರು ಕೋಳಿ ಫಾರಂ ಬಳಿ ಹೆಚ್ಚಿನ ಜನರು ಸೇರದಂತೆ ಸೂಚಿಸಿದ್ದರು. ಬಳಿಕ ಸ್ಥಳಕ್ಕಾಗಮಿಸಿ ಕಾರ್ಯಾಚರಣೆ ನಡೆಸಿದ ಜಯಪುರ ವಲಯ ಅರಣ್ಯ ಸಿಬ್ಬಂದಿ, ಅರವಳಿಕೆ ನೀಡುವ ಮೂಲಕ ಚಿರತೆ ಸೆರೆ ಹಿಡಿದಿದ್ದಾರೆ. ಸೆರೆಯಾಗಿರುವ ಚಿರತೆ ಐದು ವರ್ಷದ ವಯಸ್ಸಿನದ್ದು ಎಂದು ಅಂದಾಜಿಸಲಾಗಿದೆ.