ಮುಂಬೈ/ಮೈಸೂರು: ಶಾಸಕ ಸ್ಥಾನದಿಂದ ಅನರ್ಹಗೊಂಡಿರುವ ಮಾಜಿ ಶಾಸಕ ಹೆಚ್. ವಿಶ್ವನಾಥ್ ತಮ್ಮ ಕ್ಷೇತ್ರದ ಜನರಿಗಾಗಿ ಮುಂಬೈ ಹೋಟೆಲ್ನಿಂದಲೇ ವಿಡಿಯೋ ಸಂದೇಶ ರವಾನಿಸಿದ್ದಾರೆ.
''ಹುಣಸೂರು ವಿಧಾನಸಭಾ ಕ್ಷೇತ್ರದ ಸಮಸ್ತ ಮತದಾರ ಬಂಧುಗಳಲ್ಲಿ ನಾನು ಕ್ಷಮೆ ಯಾಚಿಸಲು ಬಯಸುತ್ತೇನೆ. ರಾಜಕೀಯ ವಿರೋಧಿಗಳು ನನ್ನ ಬಗ್ಗೆ ಅಪಪ್ರಚಾರ ಮಾಡುತ್ತಿದ್ದಾರೆ. ಈ ವದಂತಿಗಳಿಗೆ ನೀವು ಕಿವಿಗೊಡಬೇಡಿ'' ಎಂದು ವಿಶ್ವನಾಥ್ ಮನವಿ ಮಾಡಿದ್ದಾರೆ.
''ಕಳೆದ 40 ವರ್ಷಗಳಿಂದ ನಾನು ರಾಜಕೀಯ ಜೀವನದಲ್ಲಿದ್ದು, ದೇವರಾಜ ಅರಸು, ವೀರೇಂದ್ರ ಪಾಟೀಲ್, ಬಂಗಾರಪ್ಪ, ಎಸ್.ಎಂ ಕೃಷ್ಣರಂತಹ ದೊಡ್ಡ ನಾಯಕರ ಜತೆ ಕೆಲಸ ಮಾಡಿದ್ದೇನೆ. ನಾನು ಎಂದಿಗೂ ದುಡ್ಡಿಗಾಗಿ ನನ್ನನ್ನು ಮಾರಿಕೊಂಡವನಲ್ಲ'' ಎಂದು ಸ್ಪಷ್ಟನೆ ನೀಡಿದ್ದಾರೆ.

''ನೀವು ನನಗೆ ಕೊಟ್ಟಿರುವ ಮತಗಳಿಗೆ ಅಪಚಾರ ಮಾಡುವವನಲ್ಲ. ನಿಮ್ಮ ಪ್ರೀತಿ, ಮತಗಳಿಗೆ ಸದಾ ಋಣಿಯಾಗಿದ್ದೇನೆ. ಆದರೆ ಪದೇ ಪದೇ ಆದ ಅವಮಾನ, ತಾರತಮ್ಯಗಳನ್ನು ನುಂಗಲಾರದೇ ರಾಜೀನಾಮೆ ನಿರ್ಧಾರ ಮಾಡಿದೆ. ಕ್ಷೇತ್ರದ ಜನರ ಸ್ವಾಭಿಮಾನ ಹಾಗೂ ಒಳಿತಿಗಾಗಿ ಈ ಕೆಲಸ ಮಾಡಲೇಬೇಕಾಯ್ತು. ಇಷ್ಟೆಲ್ಲದರ ಮಧ್ಯೆ ದ್ವೇಷಪೂರಿತ ವ್ಯವಸ್ಥೆ ನಮ್ಮನ್ನು ದಮನ ಮಾಡಲು, ರಾಜಕೀಯವಾಗಿ ಮುಗಿಸಲು ಹೊರಟಿದೆ'' ಎಂದು ಹೆಚ್ ವಿಶ್ವನಾಥ್ ಆರೋಪಿಸಿದ್ದಾರೆ.
''ಇದೀಗ ನ್ಯಾಯ ಅರಸಿ ನಾನು ಮತ್ತು ನನ್ನ ಸ್ನೇಹಿತರು ಸುಪ್ರೀಂಕೋರ್ಟ್ ಬಾಗಿಲು ತಟ್ಟುತ್ತಿದ್ದೇವೆ. ಸದ್ಯದಲ್ಲೇ ಹುಣಸೂರಿಗೆ ಬಂದು, ನಿಮ್ಮನ್ನೆಲ್ಲ ಭೇಟಿಯಾಗಿ ಸತ್ಯ ಸಂಗತಿ ಏನೆಂದು ತಿಳಿಸುವೆ. ಆವರೆಗೆ ವದಂತಿಗಳಿಗೆ ಕಿವಿಗೊಡದೆ ನನ್ನ ಮಾತು ನಂಬಿ. ಎಂದಿನಂತೆ ಆಶೀರ್ವದಿಸಿ'' ಎಂದು ಅವರು ಮನವಿ ಮಾಡಿದ್ದಾರೆ.