ಮೈಸೂರು: ಬೋಳು ಮರಕ್ಕೆ ಅಂತ್ಯಕ್ರಿಯೆ ಮಾಡುವ ಮೂಲಕ ಪರಿಸರ ಪ್ರೇಮಿಗಳು ವಿಶಿಷ್ಟ ರೀತಿಯಲ್ಲಿ ಶ್ರದ್ಧಾಂಜಲಿ ಸಲ್ಲಿಸಿ ನಗರದ ಯಾದವಗಿರಿಯಲ್ಲಿ ವಿನೂತನ ರೀತಿಯಲ್ಲಿ ಪ್ರತಿಭಟನೆ ನಡೆಸಿದರು.
ಯಾದವಗಿರಿ ತಾರಸು ವೃತ್ತದ ಬಳಿ ಇರುವ ವಿವೇಕಾನಂದ ರಸ್ತೆಯಲ್ಲಿ ಇರುವ ಆಸ್ಪತ್ರೆಯೊಂದರ ಮುಂಭಾಗ ನಾಲ್ಕು ಮರಗಳನ್ನ ರಾತ್ರೋರಾತ್ರಿ ಬುಡದ ವರೆಗೆ ಕಡಿದಿರುವುದನ್ನು ಖಂಡಿಸಿ, ಮರಕ್ಕೆ ಅಂತ್ಯಕ್ರಿಯೆ ಮಾಡಿ ಮತ್ತೆ ಹುಟ್ಟಿ ಬಾ ಮರವೇ ಎಂದು ಹೇಳಿ ಶ್ರದ್ಧಾಂಜಲಿ ಅರ್ಪಿಸಿ ವಿಶೇಷವಾಗಿ ಪರಿಸರ ಪ್ರಿಯರು ಪ್ರತಿಭಟನೆ ನಡೆಸಿದ್ದಾರೆ.
40 ವರ್ಷ ಹಳೆಯ ಮರ
ಆಸ್ಪತ್ರೆಯ ಮುಂಭಾಗ ಇರುವ ಗುಲ್ ಮೊಹರ್ ಮರ ಕಳೆದ 40 ವರ್ಷಗಳಿಂದ ಸುತ್ತಲಿನ ಜನರಿಗೆ ಶುದ್ಧ ಗಾಳಿ, ಆಸ್ಪತ್ರೆಗೆ ಬರುವ ರೋಗಿಗಳಿಗೆ, ನಾಗರೀಕರಿಗೆ ನೆರಳಿನ ಆಶ್ರಯ ನೀಡುತ್ತಿತ್ತು. ಇದನ್ನು ರಾತ್ರೋರಾತ್ರಿ ಕಡಿದು ಹಾಕಲಾಗಿದೆ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.
ಮರಕ್ಕೆ ಪುಷ್ಪ ನಮನ ಸಲ್ಲಿಸಿ, 'ನೀನು ಇರುವಾಗ ಎಷ್ಟೋ ಜನಕ್ಕೆ ಆಮ್ಲಜನಕವನ್ನು ಕೊಟ್ಟೆ, ಪ್ರಾಣಿ ಪಕ್ಷಿಗಳಿಗೆ, ನೂರಾರು ಕ್ರಿಮಿ ಕೀಟಗಳಿಗೆ ಆಶ್ರಯವನ್ನು ಕೊಟ್ಟೆ. ನಿನ್ನನ್ನು ನಾವು ಇಂದು ಕಳೆದುಕೊಂಡಿದ್ದೇವೆ, ಇದರಿಂದ ನೋವಾಗಿದೆ' ಎಂದು ಪರಿಸರ ಪ್ರಿಯರು ಬೇಸರ ವ್ಯಕ್ತಪಡಿಸಿದರು.
ಪುರೋಹಿತರಿಂದಲೇ ಮರಗಳಿಗೆ ಅಂತ್ಯ ಸಂಸ್ಕಾರ
ಸಾಮಾನ್ಯವಾಗಿ ತಿಥಿ ಕಾರ್ಯಗಳಿಗೆ ಬಳಸುವ ಸಾಮಗ್ರಿಗಳನ್ನು ಬಳಸಿ, ಪುರೋಹಿತರು ಮರಗಳಿಗೆ ಅಂತ್ಯ ಸಂಸ್ಕಾರ ನಡೆಸಿದರು. ಅಲ್ಲಿ ನೆರೆದಿದ್ದ ಸ್ಥಳೀಯರು ಮತ್ತು ಪರಿಸರ ಪ್ರಿಯರು ಹೂವಿನ ಹಾರಗಳನ್ನು ಅರ್ಪಿಸಿದರು. ಮೈಸೂರಿನಲ್ಲಿ ಎಲ್ಲೇ ಮರ ಕಡಿದರು ಅದನ್ನು ತಡೆಯುತ್ತೇವೆ ಮತ್ತು ಅದರ ವಿರುದ್ಧ ಹೋರಾಟ ಮಾಡುತ್ತೇವೆ ಎಂದು ಪ್ರತಿಜ್ಞೆ ಮಾಡಿದರು.
ಬೆಳೆದಿರುವ ಮರವನ್ನು ಕಡಿದು ಹಾಕುವಾಗ ಅರಣ್ಯ ಇಲಾಖೆಯವರು ಮತ್ತು ಸಂಬಂಧ ಪಟ್ಟ ಅಧಿಕಾರಿಗಳು ಏನು ಮಾಡುತ್ತಿದ್ದಾರೆ? ಯಾವುದೇ ಮರಗಳನ್ನು ಅನುಮತಿ ಇಲ್ಲದೆ ಕಡಿಯಲು ಅವಕಾಶವಿಲ್ಲ, ಅನಧಿಕೃತವಾಗಿ ಮರಗಳನ್ನು ಕಡೆದರೆ ಪ್ರತಿ ಮರಕ್ಕೆ 50 ಸಾವಿರ ರೂ. ದಂಡ ವಿಧಿಸಲು ಅವಕಾಶವಿದೆ. ಹಾಗಾಗಿ ಮರ ಕಡಿಯುವವರಿಗೆ ಮೂರು ಪಟ್ಟು ದಂಡ ವಿಧಿಸಿ ಅಂತವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು. ಮರಗಳನ್ನು ಕಡಿಯದಂತೆ ತಡೆಯಲು ಸಂಬಂಧಿಸಿದ ಅಧಿಕಾರಿಗಳು ನಿಷ್ಠೆಯಿಂದ ಪ್ರಮಾಣಿಕವಾಗಿ ಪ್ರಯತ್ನ ಮಾಡಬೇಕು. ಪರಿಸರವನ್ನ ಉಳಿಸಬೇಕು ಎಂದು ಪರಿಸರ ಪ್ರೇಮಿಗಳು ಒತ್ತಾಯಿಸಿದರು.