ಮೈಸೂರು: ಒಂಟಿ ಸಲಗವೊಂದು ತೋಟದ ಮನೆಯ ಮುಂದೆ ಕಾರಿನಲ್ಲಿ ಕುಳಿತಿದ್ದ ವ್ಯಕ್ತಿಯೊಬ್ಬರ ಮೇಲೆ ದಾಳಿ ಮಾಡಿರುವ ಘಟನೆ ನಾಗರಹೊಳೆ ರಾಷ್ಟ್ರೀಯ ಉದ್ಯಾನವನ ಮತ್ತಿಗೋಡು ಅರಣ್ಯ ವಲಯದಲ್ಲಿ ನಡೆದಿದೆ.
ಕಳೆದ ಒಂದು ವಾರದಿಂದ ಒಂಟಿ ಸಲಗವೊಂದು ನಾಗರಹೊಳೆ ರಾಷ್ಟ್ರೀಯ ಉದ್ಯಾನವನದ ಮತ್ತಿಗೋಡು ಅರಣ್ಯ ವಲಯದ ಊರಿನ ಒಳಗೆ ನುಗ್ಗಿ ಗ್ರಾಮಸ್ಥರನ್ನು ಬೆಚ್ಚಿಬೀಳಿಸುತ್ತಿದೆ. ಈ ಸಲಗ 2 ಹಸುಗಳ ಮೇಲೆ ದಾಳಿ ನಡೆಸಿದ್ದು, ಒಂದು ಮನೆಯನ್ನು ಕೆಡವಿ ಹಾಕಿದೆ. ಅಲ್ಲದೆ 4 ಜನರ ಮೇಲೆ ದಾಳಿ ನಡೆಸಿದ್ದು, ಅವರು ಅದೃಷ್ಟವಶಾತ್ ಪ್ರಾಣಾಪಾಯದಿಂದ ಪರಾರಿಯಾಗಿದ್ದಾರೆ. ಇಂದು ಬೆಳಿಗ್ಗೆ ಬಾಲಕೃಷ್ಣ ಎಂಬುವರು ತೋಟದ ಮನೆಯ ಮುಂದೆ ತಮ್ಮ ಓಮಿನಿ ಕಾರು ನಿಲ್ಲಿಸಿದ್ದು, ಅದರಲ್ಲಿ ಶಂಕರ್ ಎಂಬುವವರು ಕುಳಿತಿದ್ದರು. ಆಗ ಏಕಾಏಕಿ ಒಂಟಿ ಸಲಗವೂಂದು ದಾಳಿ ಮಾಡಿ ಕಾರಿಗೆ ಗುದ್ದಿ ಶಂಕರ್ ಅವರ ಬಲಗಾಲಿಗೆ ಗಾಯ ಮಾಡಿದೆ.
ತಕ್ಷಣ ಅವರನ್ನು ಮೈಸೂರಿನ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಅರಣ್ಯ ಅಧಿಕಾರಿಗಳಿಗೆ ಈ ಬಗ್ಗೆ ತಿಳಿಸಿದರು ಯಾವುದೇ ಕ್ರಮ ಕೈಗೊಂಡಿಲ್ಲ ಎನ್ನಲಾಗಿದೆ. ಅರಣ್ಯ ಅಧಿಕಾರಿಗಳು ಹಾಗೂ ಸಿಬ್ಬಂದಿ ವಿರುದ್ಧ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದು, ಆನೆ ಹಿಡಿಯಲು ಪ್ರಯತ್ನಿಸದಿದ್ದರೆ ಅರಣ್ಯ ಇಲಾಖೆಯ ಮುಂದೆ ಪ್ರತಿಭಟನೆ ನಡೆಸುವುದಾಗಿ ಎಚ್ಚರಿಕೆ ನೀಡಿದ್ದಾರೆ.