ಮೈಸೂರು : ಜಿಲ್ಲೆಗೆ ನೂತನ ಜಿಲ್ಲಾಧಿಕಾರಿಯ ಆಗಮನವಾಗಿದೆ. ಡಾ. ಬಗಾದಿ ಗೌತಮ್ ಅವರು ಇಂದು ಇಲ್ಲಿನ ಡಿಸಿ ಕಚೇರಿಯಲ್ಲಿ ಅಪರ ಜಿಲ್ಲಾಧಿಕಾರಿ ಮಂಜುನಾಥಸ್ವಾಮಿ ಅವರಿಂದ ಅಧಿಕಾರ ಸ್ವೀಕರಿಸಿದರು.
ಓದಿ: ಅವರೂ ವರ್ಗಾವಣೆಯಾಗಿದ್ದಾರೆ, ಅದಕ್ಕೆ ನಾನು ರಾಜೀನಾಮೆ ವಾಪಸ್ ಪಡೆದೆ : ಶಿಲ್ಪಾನಾಗ್
ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ನನ್ನ ಸರ್ವೀಸ್‌ನಲ್ಲಿ ಯಾವ ವಿವಾದಕ್ಕೂ ಆಸ್ಪದ ನೀಡಿಲ್ಲ. ನನ್ನ ಹೆಸರು ನೀವು ಕೇಳಿದ್ದಿರೋ ಇಲ್ಲವೋ ಗೊತ್ತಿಲ್ಲ. ನಾನು ತುಂಬಾ ಲೋ ಪ್ರೊಫೈಲ್ ಅಧಿಕಾರಿ ಎಂದರು.
13 ವರ್ಷದ ಅಧಿಕಾರದಲ್ಲಿ ನನ್ನ ಪಾಡಿಗೆ ನಾನು ಕೆಲಸ ಮಾಡಿಕೊಂಡು ಹೋಗುತ್ತಿದ್ದೇನೆ. ನಿಷ್ಠೆ, ಪ್ರಾಮಾಣಿಕತೆ ಹಾಗೂ ಪಾರದರ್ಶಕವಾಗಿ ನಮ್ಮ ಕೆಲಸ ಮಾಡಿಕೊಂಡು ಹೋದರೆ, ಜನರಿಂದ ಜನಪ್ರತಿನಿಧಿಗಳು ಅವರೇ ಬಂದು ಬೆಂಬಲ ಕೊಡುವುದನ್ನು ನೋಡಿದ್ದೇನೆ ಎಂದು ತಿಳಿಸಿದರು.
ಸಾಂಪ್ರದಾಯಿಕ ನಗರಿ ಮೈಸೂರಿನಲ್ಲಿ ಸ್ವಲ್ಪ ದೊಡ್ಡ ಪ್ರಮಾಣದಲ್ಲಿ ಸಮಸ್ಯೆ ಇರಬಹುದು. ನಾನು ಪಾರದರ್ಶಕವಾಗಿ ಜನರಿಗೆ ಹತ್ತಿರವಾಗಿ ಆಡಳಿತ ಕೊಡಬೇಕು ಎಂದು ಭರವಸೆ ಕೊಡುತ್ತೇನೆ. ನಮಗೆ ಇರುವ ಶಕ್ತಿಯಲ್ಲಿ ಕೆಲಸ ಮಾಡಬೇಕು.
ಎಲ್ಲ ವರ್ಗದ ಜನರನ್ನ, ಅಧಿಕಾರಿಗಳನ್ನ, ಜನಪ್ರತಿನಿಧಿಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡು ಒಂದೇ ದಿಕ್ಕಿನಲ್ಲಿ ಹೋದರೆ ದೊಡ್ಡ ಸಮಸ್ಯೆ ಬಗೆಹರಿಸಬಹುದು ಎಂದರು. ಕೋವಿಡ್ ನಿಯಂತ್ರಣ ಮಾಡಲು ಶ್ರಮಿಸುತ್ತೀನಿ, ನಗರ ಪಾಲಿಕೆ ಆಯುಕ್ತರು, ಜಿಪಂ ಸಿಇಒ ಹಾಗೂ ಅಧಿಕಾರಿಗಳ ಜೊತೆ ಮಾತುಕತೆ ನಡೆಸಿದ್ದೇನೆ ಎಂದು ಹೇಳಿದರು.