ಮೈಸೂರು: ರಾಷ್ಟ್ರೀಯ ಪಕ್ಷಿ ನವಿಲು ಸೇರಿದಂತೆ ಯಾವುದೇ ವನ್ಯಜೀವಿಗಳನ್ನು ಮನೆಯಲ್ಲಿ ಸಾಕುವುದು ಶಿಕ್ಷಾರ್ಹ ಅಪರಾಧವಾಗಿದೆ ಎಂದು ಡಿಸಿಎಫ್ ಕರಿಕಾಳನ್ ಈಟಿವಿ ಭಾರತಕ್ಕೆ ನೀಡಿದ ಸಂದರ್ಶನದಲ್ಲಿ ಹೇಳಿದ್ದಾರೆ.
ಅರಣ್ಯ ಭವನದಲ್ಲಿ ಈಟಿವಿ ಭಾರತ ಜೊತೆ ಮತನಾಡಿದ ಡಿಸಿಎಫ್ ಕರಿಕಾಳನ್, ನವಿಲು, ಹುಲಿ, ಆನೆ ಸೇರಿದಂತೆ ಯಾವುದೇ ವನ್ಯ ಪ್ರಾಣಿಗಳನ್ನು ಮನೆಯಲ್ಲಿ ಸಾಕುವುದು ವನ್ಯಜೀವಿ ಕಾಯ್ದೆಯ ಪ್ರಕಾರ ಶಿಕ್ಷಾರ್ಹ ಅಪರಾಧವಾಗಿದೆ. ಶೆಡ್ಯೂಲ್ಡ್ 1 ರಲ್ಲಿ ಬರುವ ರಾಷ್ಟ್ರೀಯ ಪ್ರಾಣಿ ಅಥವಾ ಪಕ್ಷಿಯನ್ನು ಸಾಕುವಂತಿಲ್ಲ.
ಒಂದು ವೇಳೆ ಆಕಸ್ಮಿಕವಾಗಿ ಸಿಕ್ಕಿದ್ದಲ್ಲಿ ಸ್ಥಳೀಯ ಅರಣ್ಯ ಇಲಾಖೆ ಅಥವಾ ಅಧಿಕಾರಿಗಳಿಗೆ ಮಾಹಿತಿ ನೀಡಿ ಅವುಗಳ ರಕ್ಷಣೆಗೆ ಸಹಕರಿಸಬೇಕು. ಬದಲಾಗಿ ಮಾಹಿತಿ ನೀಡದೆ ಮನೆಯಲ್ಲೇ ಸಾಕುತ್ತಿದ್ದು, ಸಿಕ್ಕಿ ಬಿದ್ದರೆ ಜಾಮೀನು ರಹಿತ ಶಿಕ್ಷೆ ವಿಧಿಸಲಾಗುವುದು ಎಂದು ತಿಳಿಸಿದರು.
ಮನೆಯಲ್ಲಿ ಸಾಕಲು ಪಾರಿವಾಳಗಳನ್ನು ಮತ್ತು ಶಾಸ್ತ್ರ ಹೇಳಲು ಗಿಳಿಗಳನ್ನು ಪಂಜರದಲ್ಲಿ ಬಂಧಿಸುವುದನ್ನು ನಿರ್ಬಂಧಿಸಲಾಗಿದೆ. ಅವುಗಳನ್ನು ವನ್ಯಜೀವಿಗಳ ಗುಂಪಿಗೆ ಸೇರಿಸಲಾಗಿದೆ. ಅರಣ್ಯ ಇಲಾಖೆಗೆ ಮಾಹಿತಿ ನೀಡಿ, ಅರಣ್ಯಾಧಿಕಾರಿಗಳಿಂದ ಡಿಕ್ಲೇರೇಷನ್ ಪಡೆಯಬೇಕು. ಇದು ವಿದೇಶದಿಂದ ಸಾಕು ಪ್ರಾಣಿಗಳನ್ನು ತಂದು ಸಾಕುವವರಿಗೆ ಮಾತ್ರ ಅನ್ವಯಿಸುತ್ತದೆ. ವನ್ಯ ಜೀವಿಗಳಿಗೆ ಅನ್ವಯ ಆಗುವುದಿಲ್ಲ ಎಂದರು.
ಇದನ್ನೂ ಓದಿ: ಮೈಸೂರು: ಮನೆಯಲ್ಲಿ ನವಿಲು ಸಾಕಿದ್ದ ವ್ಯಕ್ತಿ ಬಂಧನ
ವನ್ಯ ಜೀವಿಗಳನ್ನು ಸಾಕುವುದು, ಭೇಟೆಯಾಡುವುದು ಅಕ್ಷಮ್ಯ ಅಪರಾಧವಾಗಿದ್ದು, ಸಾಕುವುದು ಕಂಡು ಬಂದಲ್ಲಿ ದಂಡ ಸಹಿತ 8 ವರ್ಷಗಳ ವರೆಗೆ ಸೆರೆವಾಸ ವಿಧಿಸಲಾಗುವುದು. ಇಂತಹ ವಿಷಯಗಳ ಬಗ್ಗೆ ಸಾರ್ವಜನಿಕರು ಜಾಗೃತಿ ವಹಿಸಬೇಕು ಎಂದು ಹೇಳಿದರು.