ಮೈಸೂರು: ನಿಯಂತ್ರಣ ತಪ್ಪಿದ ಕಾರೊಂದು ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದ ಪರಿಣಾಮ ಸ್ಥಳದಲ್ಲೇ ಕಾರು ಚಾಲನೆ ಮಾಡುತ್ತಿದ್ದ ವೈದ್ಯ ಸಾವನ್ನಪ್ಪಿರುವ ಘಟನೆ ಸಿದ್ದಾರ್ಥ ಸಂಚಾರ ಠಾಣಾ ವ್ಯಾಪ್ತಿಯಲ್ಲಿ ಇಂದು ಸಂಭವಿಸಿದೆ. ಶಿವಕುಮಾರ್ (35) ಮೃತ ವೈದ್ಯ.
ಇವರು ನಗರದ ಇ.ಎಸ್.ಐ. ಆಸ್ಪತ್ರೆಯಲ್ಲಿ ಕೆಲಸ ಮಾಡುತ್ತಿದ್ದರು. ಮನೆಯಿಂದ ಹೊರಟು ನಗರದ ಹೊರವಲಯದ ರಿಂಗ್ ರಸ್ತೆಯ ಮಾನಸಿ ನಗರದ ಬಳಿ ತಮ್ಮ ಕಾರನ್ನು ವೇಗವಾಗಿ ಚಾಲನೆ ಮಾಡಿಕೊಂಡು ಬಂದಿದ್ದಾರೆ. ಕಾರು ನಿಯಂತ್ರಣ ತಪ್ಪಿ ರಿಂಗ್ ರಸ್ತೆಯ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದ ಪರಿಣಾಮ ಶಿವಕುಮಾರ್ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿದೆ.
ಇದನ್ನೂ ಓದಿ: ಕೊರಟಗೆರೆಯಲ್ಲಿ'ಹೊರಬೀಡು' ಆಚರಣೆ : ಊರಿಗೆ ಊರೇ ಖಾಲಿ ಖಾಲಿ
ಕಾರು ವೇಗವಾಗಿ ಬಂದು ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದ ಪರಿಣಾಮ ಕಾರಿನ ಮುಂಭಾಗ ಸಂಪೂರ್ಣ ಜಖಂ ಆಗಿದೆ. ಸ್ಥಳಕ್ಕೆ ಸಿದ್ದಾರ್ಥ ಸಂಚಾರಿ ಪೊಲೀಸರು ಆಗಮಿಸಿ ಕ್ರೇನ್ ಮೂಲಕ ಅಪಘಾತವಾದ ಕಾರನ್ನು ತೆರವುಗೊಳಿಸಿದರು. ವೈದ್ಯನ ಮೃತ ದೇಹವನ್ನು ಶವಾಗಾರಕ್ಕೆ ಸ್ಥಳಾಂತರಿಸಿದ್ದಾರೆ.