ಮೈಸೂರು: ದಸರಾದ ಹಾಲು ಕರೆಯುವ ಸ್ಪರ್ಧೆಯಲ್ಲಿ ಲಷ್ಕರ್ ಮೊಹಲ್ಲಾದ ಅನ್ವರ್ ಷರೀಫ್ ಅವರ ಹಸು 35.6 ಕೆಜಿ ಹಾಲು ನೀಡುವ ಮೂಲಕ ಸ್ಪರ್ಧೆಯಲ್ಲಿ ಮೊದಲ ಸ್ಥಾನ ಗಳಿಸಿ, ತನ್ನ ಮಾಲೀಕರಿಗೆ 50 ಸಾವಿರ ಬಹುಮಾನ ತಂದುಕೊಟ್ಟಿತು.
ನಗರ ಜೆ.ಕೆ ಮೈದಾನದಲ್ಲಿ ನಾಡಹಬ್ಬ ದಸರಾ ಮಹೋತ್ಸವ ಪ್ರಯುಕ್ತ ರೈತ ದಸರಾ ಉಪ ಸಮಿತಿಯಿಂದ ಆಯೋಜಿಸಿದ್ದ ರಾಜ್ಯ ಮಟ್ಟದ ಹಾಲು ಕರೆಯುವ ಸ್ಪರ್ಧೆಯನ್ನು ಸಂಸದರಾದ ಪ್ರತಾಪ್ ಸಿಂಹ ಉದ್ಘಾಟಿಸಿದರು. ರಾಜ್ಯ ಮಟ್ಟದ ಹಾಲು ಕರೆಯುವ ಸ್ಪರ್ಧೆಗೆ 7 ಗೋವುಗಳನ್ನು ತರಲಾಗಿತ್ತು. ಸ್ಪರ್ಧೆಯಲ್ಲಿದ್ದ ಲಷ್ಕರ್ ಮೊಹಲ್ಲಾದ ಅನ್ವರ್ ಷರೀಫ್ ಅವರ ಗೋವು ಬೆಳಗ್ಗೆ 19 ಹಾಗೂ ಸಂಜೆ 16 ಕೆ.ಜಿ. 650 ಗ್ರಾಂ ಹಾಲು ಕೊಡುವ ಮೂಲಕ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನ ಗಳಿಸಿತು.
ಬೆಂಗಳೂರು ಉತ್ತರದ ಕೆಂಗನಹಳ್ಳಿಯ ಸೌತಡ್ಕ ಗಣಪತಿ ಡೈರಿ ಫಾರಂನ ಹಸು ದಿನಕ್ಕೆ 34.65 ಕೆಜಿ ಹಾಲು ನೀಡುವ ಮೂಲಕ ದ್ವಿತೀಯ ಸ್ಥಾನ ಗಳಿಸಿ 40 ಸಾವಿರ ಬಹುಮಾನ ಪಡೆಯಿತು. ಚನ್ನರಾಯಪಟ್ಟಣ ಜನಿವಾರದ ಸಂತೋಷ್ ವಿನೋದ್ ಅವರ ಹಸು 31.4 ಕೆಜಿ ಹಾಲು ನೀಡಿ 30 ಸಾವಿರ ರೂ. ಜೊತೆ ತೃತೀಯ ಬಹುಮಾನ ಪಡೆಯಿತು. ಬೆಂಗಳೂರಿನ ನೆಲಮಂಗಲದ ಚಂದನ್ ಬಿನ್ ಮುನಿರಾಜು ಅವರ ಹಸು 29.8 ಕೆಜಿ ಹಾಲು ನೀಡುವ ಮೂಲಕ 10 ಸಾವಿರ ಸಮಾಧಾನಕರ ಬಹುಮಾನ ಪಡೆಯಿತು.