ಮೈಸೂರು: ಮಹಿಳೆಯ ಮನೆ ಮುಂದೆ ಗಲಾಟೆ ಮಾಡಿದ ಆರೋಪದ ಮೇರೆಗೆ ಪೊಲೀಸರ ವಶದಲ್ಲಿದ್ದ ವ್ಯಕ್ತಿಯೊಬ್ಬ ಅನುಮಾನಸ್ಪದವಾಗಿ ಸಾವನ್ನಪ್ಪಿದ ಘಟನೆ ಮೈಸೂರಿನ ನಂಜನಗೂಡಿನಲ್ಲಿ ನಡೆದಿದ್ದು, ಲಾಕಪ್ ಡೆತ್ ಆರೋಪ ಕೇಳಿ ಬಂದಿದೆ.
Custodial death in Nanjangud: ನಂಜನಗೂಡು ತಾಲೂಕಿನ ಬ್ಯಾಳಾರುಹುಂಡಿ ಗ್ರಾಮದ ನಿವಾಸಿ ಸಿದ್ದರಾಜು (31) ಮೃತ ವ್ಯಕ್ತಿ. ಈತ ಪೊಲೀಸ್ ಕಸ್ಟಡಿಯಲ್ಲಿದ್ದಾಗ ಅಸ್ವಸ್ಥಗೊಂಡು ವಾಂತಿ ಮಾಡಿಕೊಂಡ ಹಿನ್ನೆಲೆ ಆತನನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಲಾಯಿತು. ಆದರೆ, ಅಷ್ಟರಲ್ಲಿ ಆತ ಮೃತಪಟ್ಟಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಆದರೆ ಪೊಲೀಸರು ನಡೆಸಿದ ಹಲ್ಲೆಯಿಂದ ಆರೋಪಿ ಸಾವನ್ನಪ್ಪಿದ್ದಾನೆ. ಇದು ಲಾಕಪ್ ಡೆತ್ ಎಂಬ ಮಾತು ಸಾರ್ವಜನಿಕ ವಲಯದಲ್ಲಿ ಕೇಳಿ ಬಂದಿದೆ.
ಘಟನೆ ವಿವರ: ಬ್ಯಾಳಾರುಹುಂಡಿ ನಿವಾಸಿ ಸಿದ್ದರಾಜು ಶನಿವಾರ ರಾತ್ರಿ ಅದೇ ಗ್ರಾಮದ ಮಹಿಳೆಯೊಬ್ಬರ ಮನೆ ಮನೆ ಮುಂದೆ ಗಲಾಟೆ ಮಾಡುತ್ತಿದ್ದಾನೆ ಎಂದು 112ಕ್ಕೆ ದೂರು ಬಂದಿತ್ತು. ನಂಜನಗೂಡು ಗ್ರಾಮಾಂತರ ಠಾಣಾ ಪೊಲೀಸರು ಸ್ಥಳಕ್ಕೆ ತೆರಳಿ ವ್ಯಕ್ತಿಯನ್ನು ವಶಕ್ಕೆ ಪಡೆದಿದ್ದರು. ಠಾಣೆಯಲ್ಲಿದ್ದ ಸಿದ್ದರಾಜು ಭಾನುವಾರ ಮಧ್ಯಾಹ್ನ ತೀವ್ರ ಅಸ್ವಸ್ಥಗೊಂಡ ಹಿನ್ನೆಲೆ ಪೊಲೀಸರು ಆತನನ್ನು ಸರ್ಕಾರಿ ಆಸ್ಪತ್ರೆಗೆ ಕೊಂಡೊಯ್ದಿದ್ದರು. ಆದರೆ, ಅಷ್ಟರಲ್ಲಿ ಆತ ಸಾವನ್ನಪ್ಪಿರುವುದಾಗಿ ವೈದ್ಯರು ಘೋಷಿಸಿದ್ದಾರೆ.
ತಾವು ವಶಕ್ಕೆ ಪಡೆದಾಗ ಸಿದ್ದರಾಜು ಪಾನಮತ್ತನಾಗಿದ್ದನಲ್ಲದೇ, ಆತನ ಮೇಲೆ ಯುವಕರು ತೀವ್ರವಾಗಿ ಹಲ್ಲೆ ನಡೆಸಿದ್ದರು. ಮಧ್ಯಾಹ್ನ 1 ಗಂಟೆ ಸುಮಾರಿನಲ್ಲಿ ಸಿದ್ದರಾಜು ಅಸ್ವಸ್ಥಗೊಂಡಿದ್ದ. ಆತನನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತು ಎಂದು ಪೊಲೀಸರು ಹೇಳಿದ್ದಾರೆ. ಆದರೆ ಪೊಲೀಸರು ಆಸ್ಪತ್ರೆ ಪ್ರವೇಶಿಸಿದ್ದೇ ಮಧ್ಯಾಹ್ನ 2.30ರ ನಂತರ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ. ಸಿಸಿ ಕ್ಯಾಮರಾ ದೃಶ್ಯಾವಳಿ ಪರಿಶೀಲಿಸಿದರೆ ಸತ್ಯಾಂಶ ತಿಳಿಯಲಿದೆ. ಹಲ್ಲೆಗೊಳಗಾದ ಸಿದ್ದರಾಜುವನ್ನು ಆಸ್ಪತ್ರೆಗೆ ದಾಖಲಿಸದೇ ಮಧ್ಯಾಹ್ನದವರೆಗೆ ಠಾಣೆಯೊಳಗೆ ಯಾಕೆ ಇಟ್ಟುಕೊಂಡಿದ್ದರಾ ಎಂಬ ಪ್ರಶ್ನೆ ಉದ್ಭವಿಸಿದೆ.
ಇನ್ನು ನಂಜನಗೂಡು ಗ್ರಾಮಾಂತರ ಠಾಣೆಗೆ ಜಿಲ್ಲಾ ಎಸ್ಪಿ ಚೇತನ್, ಅಡಿಷನಲ್ ಎಸ್.ಪಿ ಶಿವಕುಮಾರ್ ಭೇಟಿ ನೀಡಿದ್ದರು. ಮರಣೋತ್ತರ ಪರೀಕ್ಷೆಗಾಗಿ ಸಿದ್ದರಾಜು ಮೃತದೇಹವನ್ನು ಮೈಸೂರಿಗೆ ರವಾನಿಸಲಾಗಿದ್ದು, ಇಂದು ಪರೀಕ್ಷೆ ನಡೆಯಲಿದೆ.
ನಂಜನಗೂಡು ಲಾಕಪ್ ಡೆತ್ ಕುರಿತು ಎಸ್ಪಿ ಹೇಳುವುದೇನು..?
ಈ ಕುರಿತು ಜಿಲ್ಲಾ ಎಸ್ಪಿ ಚೇತನ್ ಪ್ರತಿಕ್ರಿಯಿಸಿ, ನಂಜನಗೂಡು ಗ್ರಾಮಾಂತರ ಠಾಣೆಯಲ್ಲಿ ನಡೆದಿರುವುದು ಕಷ್ಟೋಡಿಯಲ್ ಡೆತ್ ಹೌದಾ? ಅಲ್ಲವಾ ? ಎಂಬುದು ತನಿಖೆಯಿಂದ ತಿಳಿಯಬೇಕಾಗಿದೆ. ಶನಿವಾರ ರಾತ್ರಿ 112 ಕ್ಕೆ ಕರೆಮಾಡಿ ವ್ಯಕ್ತಿಯೊಬ್ಬ ಮಹಿಳೆಗೆ ತೊಂದರೆ ಕೊಡುತ್ತಿದ್ದಾರೆ ಎಂದು ತಿಳಿಸಿದ್ದರು. ಈ ಸಂದರ್ಭದಲ್ಲಿ ತಕ್ಷಣ ಪೊಲೀಸರು ಸ್ಥಳಕ್ಕೆ ಹೋಗಿ ಆತನನ್ನು ಠಾಣೆಗೆ ಕರೆತಂದಿದ್ದರು. ಆರೋಪಿ ಪಾನಮತ್ತನಾಗಿದ್ದ ಕಾರಣ ವೈದ್ಯಕೀಯ ಪರೀಕ್ಷೆಯನ್ನು ನಡೆಸಲಾಗಿದೆ.
ಭಾನುವಾರ ಮಧ್ಯಾಹ್ನ 12 ಗಂಟೆ ಸುಮಾರಿಗೆ ಮಹಿಳೆ ಠಾಣೆಗೆ ಬಂದು ದೂರು ನೀಡಿದ್ದು, 12.30 ರ ಸುಮಾರಿನಲ್ಲಿ ಆತ ಅಸ್ವಸ್ಥಗೊಂಡ ಕಾರಣ ಆಸ್ಪತ್ರೆಗೆ ದಾಖಲಿಸಿದ್ದು, ಆತ ಸಾವನ್ನಪ್ಪಿರುವುದಾಗಿ ತಿಳಿಸಿದ್ದಾರೆ. ಈ ಸಂಬಂಧ ಮೃತನ ಕುಟುಂಬದ ಸದಸ್ಯರು ನೀಡುವ ದೂರಿನ ಮೇರೆಗೆ ತನಿಖೆ ಮಾಡಲಿದ್ದೇವೆ ಎಂದು ಎಸ್ಪಿ ಚೇತನ್ ತಿಳಿಸಿದ್ದಾರೆ.