ಮೈಸೂರು: ನೆರೆ ಸಂತ್ರಸ್ಥೆಗೆ ಸೇರಬೇಕಿದ್ದ ಪರಿಹಾರ ಹಣವನ್ನು, ಪಕ್ಷವೊಂದರ ಕಾರ್ಯಕರ್ತ ಮೋಸದಿಂದ ವಂಚಿಸಿ ಹಣ ಪಡೆದುಕೊಂಡಿರುವ ಘಟನೆ ನಂಜನಗೂಡು ತಾಲ್ಲೂಕಿನ ಹಾಡ್ಯ ಗ್ರಾಮದಲ್ಲಿ ನಡೆದಿದೆ.
ನಂಜನಗೂಡು ತಾಲೂಕಿನ ಹಾಡ್ಯ ಗ್ರಾಮದ ನಿವಾಸಿಯಾದ ವೃದ್ಧೆ ಕೆಂಪದೇವಮ್ಮ (75) ಇವರ ಮನೆ ಕಳೆದ 5 ತಿಂಗಳ ಹಿಂದೆ ಸುರಿದ ಭಾರಿ ಮಳೆಗೆ ಕುಸಿದು ಬಿದ್ದಿತ್ತು. ಸರ್ಕಾರ ಮನೆ ಕಳೆದುಕೊಂಡವರಿಗೆ ನೆರೆ ಪರಿಹಾರ ಹಣ ನೀಡುತ್ತಿದ್ದು, ಪಕ್ಷದ ಕಾರ್ಯಕರ್ತನೊಬ್ಬ ಬಂದ ಹಣವನ್ನು ವಂಚಿಸಿ ಚೆಕ್ ಪಡೆದುಕೊಂಡಿದ್ದಾನೆ ಎಂದು ವೃದ್ಧೆ ದೂರಿದ್ದಾರೆ.
ಭಾರಿ ಮಳೆಗೆ ಮನೆ ಕಳೆದುಕೊಂಡವರ ಮನೆ ಪರಿಶೀಲನೆ ಮಾಡಲು ಅಧಿಕಾರಿಗಳು ಬಂದಿದ್ದ ಸಂದರ್ಭದಲ್ಲಿ ಕೆಂಪದೇವಮ್ಮ ಅನಾರೋಗ್ಯದಿಂದ ಆಸ್ಪತ್ರೆಗೆ ದಾಖಲಾಗಿದ್ದರು. ಅದೇ ಮನೆಯ ಪಕ್ಕದಲ್ಲಿದ್ದ ಶಂಕರ್ ತನ್ನ ತಾಯಿ ಪುಟ್ಟಮ್ಮರವರನ್ನು ಕುಸಿದ ಮನೆಯ ಮುಂದೆ ನಿಲ್ಲಿಸಿ, ಅಧಿಕಾರಿಗಳಿಂದ ಅದನ್ನು ಫೋಟೋ ತೆಗೆಸಿ ನಕಲಿ ದಾಖಲೆ ಸೃಷ್ಟಿಸಿದ್ದಾನೆ. ಈ ಮೂಲಕ ಸರ್ಕಾರದಿಂದ 1ಲಕ್ಷ ಚೆಕ್ ಪಡೆದುಕೊಂಡಿದ್ದಾನೆ ಎಂದು ವೃದ್ಧೆ ಆರೋಪಿಸಿದ್ದಾರೆ.