ಮೈಸೂರು : ಜಿಲ್ಲಾಧಿಕಾರಿಯಾಗಿದ್ದ ಸಂದರ್ಭದಲ್ಲಿ ರೋಹಿಣಿ ಸಿಂಧೂರಿ ಅವರು 'ಬಟ್ಟೆ ಬ್ಯಾಗ್ ಖರೀದಿ'ಯಲ್ಲಿ ಹಗರಣ ಮಾಡಿದ್ದಾರೆ ಎಂಬ ವಿಷಯವನ್ನ ಶಾಸಕ ಸಾ ರಾ ಮಹೇಶ್ ಬಯಲಿಗೆಳೆದಿದ್ದರು. ಈಗ ಹಗರದ ತನಿಖೆಗೆ ರಾಜ್ಯ ಸರ್ಕಾರ ಆದೇಶಿಸಿದೆ. ನಗರಸಭೆ, ಪುರಸಭೆ ಹಾಗೂ ಮಹಾನಗರ ಪಾಲಿಕೆಯ ಪೂರ್ವಾನುಮತಿಯಿಲ್ಲದೇ ದುಬಾರಿ ಬೆಲೆಗೆ ಬಟ್ಟೆ ಬ್ಯಾಗ್ಗಳನ್ನು ಖರೀದಿಸಲಾಗಿದೆ ಎಂದು ಸಾ.ರಾ ಮಹೇಶ್ ದೂರಿದ್ದರು.
![Karnataka govt order probe against Rohini Sindhuri](https://etvbharatimages.akamaized.net/etvbharat/prod-images/kn-mys-04-rohinisindhuriinvestigationordernews-7308092_23032022162521_2303f_1648032921_733.jpg)
ಚಿಲ್ಲರೆ ಮಾರುಕಟ್ಟೆಯಲ್ಲಿ 10 ರಿಂದ 13 ರೂ.ಗೆ ಸಿಗುವ ಬ್ಯಾಗ್ಗಳನ್ನ, ರೋಹಿಣಿ ಸಿಂಧೂರಿ ಅವರು 52 ರೂ. ಕೊಟ್ಟು ಖರೀದಿಸಿದ್ದಾರೆ. ಇದರಿಂದ ಸಾರ್ವಜನಿಕರ ಹಣ ವ್ಯರ್ಥವಾಗಿದೆ. ಡಿಸಿ ರೋಹಿಣಿ ಸಿಂಧೂರಿ ₹14.71 ಲಕ್ಷ ಬಟ್ಟೆ ಬ್ಯಾಗ್ಗಳನ್ನು ₹14 ಕೋಟಿ ಮೊತ್ತಕ್ಕೆ ಖರೀದಿಸಿದ್ದರು. ಕೈಮಗ್ಗ ನಿಗಮದ ಬದಲು ಖಾಸಗಿ ವ್ಯಕ್ತಿಗೆ ಟೆಂಡರ್ ನೀಡುವ ಮೂಲಕ ₹6.8 ಕೋಟಿ ಅವ್ಯವಹಾರ ನಡೆದಿದೆ ಎಂದು ಸಾ ರಾ ಮಹೇಶ್ ಆರೋಪಿಸಿದ್ದರು.
ಸ್ಥಳೀಯ ಸಂಸ್ಥೆಗಳ ಪೂರ್ವಾನುಮತಿಯಿಲ್ಲದೇೆ, ರೋಹಿಣಿ ಸಿಂಧೂರಿ ಬ್ಯಾಗ್ ಖರೀದಿಸಿದ್ದು ನಿರಂಕುಶತೆಯ ಸಂಕೇತ. ಇದನ್ನು ಸಿಎಂ ಅವರ ಗಮನಕ್ಕೆ ತರುತ್ತೇನೆ. ಅವರನ್ನು ಸೇವೆಯಿಂದ ವಜಾಗೊಳಿಸದಿದ್ದರೆ, ಮುಖ್ಯ ಕಾರ್ಯದರ್ಶಿ ಕಚೇರಿ ಮುಂದೆ ಧರಣಿ ನಡೆಸುತ್ತೇನೆ ಎಂದಿದ್ದರು. ಈ ಆರೋಪಕ್ಕೆ ಸ್ಪಷ್ಟನೆ ನೀಡಿದ್ದ ಸಿಂಧೂರಿ, ಶಾಸಕರ ಆರೋಪ ಆಧಾರ ರಹಿತವಾದದ್ದು. ಬ್ಯಾಗ್ ಪೂರೈಕೆಗೆ ನಿಯಮಾನುಸಾರ ಅಭಿವೃದ್ಧಿ ನಿಗಮಕ್ಕೆ ಗುತ್ತಿಗೆ ನೀಡಲಾಗಿತ್ತು.
![Karnataka govt order probe against Rohini Sindhuri](https://etvbharatimages.akamaized.net/etvbharat/prod-images/kn-mys-04-rohinisindhuriinvestigationordernews-7308092_23032022162521_2303f_1648032921_304.jpg)
ನಿಗಮವೇ ದರವನ್ನು ನಿಗದಿ ಮಾಡಿದ್ದು, ಇದರಲ್ಲಿ ನನ್ನ ಪಾತ್ರ ಏನೂ ಇಲ್ಲ. ಪ್ರಾದೇಶಿಕ ಜವಳಿ ಪ್ರಯೋಗಾಲಯವು ಬ್ಯಾಗ್ಗಳ ಗುಣಮಟ್ಟ ದೃಢೀಕರಿಸಿತ್ತು. ಜಿಲ್ಲಾಧಿಕಾರಿಯಾಗಿದ್ದಾಗ ನಾನು ಒಂದು ಪೈಸೆಯನ್ನು ನಿಗಮಕ್ಕೆ ನೀಡಿಲ್ಲ. ಈಗ 9.59 ಲಕ್ಷ ಮಾತ್ರ ನಿಗಮಕ್ಕೆ ಪಾವತಿಯಾಗಿದೆ ಎಂದು ರೋಹಿಣಿ ಸಿಂಧೂರಿ ಸ್ಪಷ್ಟನೆ ನೀಡಿದ್ದರು. ಈಗ ಕರ್ನಾಟಕ ಸರ್ಕಾರ ತನಿಖೆಗೆ ಆದೇಶ ನೀಡಿದೆ.
ಇದನ್ನೂ ಓದಿ: ರೋಹಿಣಿ ಸಿಂಧೂರಿ ವಿರುದ್ಧ ಹೋರಾಟ ಮುಂದುವರೆಸುತ್ತೇನೆ: ಸಾ.ರಾ. ಮಹೇಶ್