ಮೈಸೂರು: ಮನೆ ಮುಂದೆ ನಿಲ್ಲಿಸಿದ್ದ ವಾಹನಗಳನ್ನು ಕಳ್ಳತನ ಮಾಡುವುದನ್ನು ಕೇಳಿದ್ದೇವೆ. ಆದ್ರೆ ಇದೀಗ ದುಬಾರಿ ಕಾರ್ಗಳ ಲೋಗೊವನ್ನು ಕದ್ದಿರುವ ಕಳ್ಳರ ಗ್ಯಾಂಗ್ವೊಂದು ನಗರದಲ್ಲಿ ಸದ್ದು ಮಾಡ್ತಿದೆ.
ಲಭ್ಯವಾಗಿರುವ ಈ ಸಿಸಿಟಿವಿ ದೃಶ್ಯಗಳೇ ಖದೀಮರ ಕೃತ್ಯಕ್ಕೆ ಸಾಕ್ಷಿಯಂತಿದೆ. ನಗರದ ಶ್ರೀರಾಂಪುರದ ಕಾಂಗ್ರೆಸ್ ಮುಖಂಡ ಸಿ ಎನ್ ಮಂಜೇಗೌಡ ಎಂಬುವರು ತಮ್ಮ ಹಲವು ಕಾರುಗಳ ಮಧ್ಯೆ ದುಬಾರಿ ಬೆಲೆಯ BMW ಕಾರನ್ನು ಮನೆ ಮುಂದೆ ನಿಲ್ಲಿಸಿದ್ದರು. ಈ ಕಾರಿನ ಹತ್ತಿರ ಬಂದ ಇಬ್ಬರು ದುಷ್ಕರ್ಮಿಗಳು ಮುಖಕ್ಕೆ ಬಟ್ಟೆ ಕಟ್ಟಿಕೊಂಡು ಬಿಎಮ್ಡಬ್ಲ್ಯೂ ಕಾರ್ ಲೋಗೊವನ್ನು ಬಿಚ್ಚಿಕೊಂಡು ಪರಾರಿಯಾಗಿದ್ದಾರೆ.
ಈ ರೀತಿಯ ದುಬಾರಿ ಬೆಲೆಯ ಕಾರ್ಗಳ ಲೋಗೊವನ್ನು ಬಿಚ್ಚುವ ಒಂದು ತಂಡ ನಗರದ ಪ್ರತಿಷ್ಠಿತ ಬಡಾವಣೆ ಹಾಗೂ ವ್ಯಾಪಾರಿ ಸ್ಥಳಗಳಲ್ಲಿ ಕಾರ್ಯ ನಿರ್ವಹಿಸುತ್ತಿದೆ ಎನ್ನಲಾಗ್ತಿದೆ.
ಈ ಪ್ರಕರಣ ಕುವೆಂಪು ನಗರ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದು, ಕಳ್ಳತನದ ದೃಶ್ಯ ಮನೆಯ ಮುಂದೆ ಹಾಕಿದ್ದ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಆದರೂ ಈ ಬಗ್ಗೆ ಯಾವುದೇ ದೂರು ದಾಖಲಾಗಿಲ್ಲ ಎಂದು ತಿಳಿದುಬಂದಿದೆ.