ಮೈಸೂರು: ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರನ್ನು ಬಿಟ್ಟು, ಬಿಜೆಪಿ ಚುನಾವಣೆಗೆ ಪ್ಲಾನ್ ಮಾಡುತ್ತಿದೆ. ಅದಕ್ಕಾಗಿ ಈ ರೀತಿ ವಿವಾದ ಸೃಷ್ಟಿಸುತ್ತಿರುವುದಾಗಿ ಎಂದು ವಾಟಾಳ್ ಪಕ್ಷದ ಅಧ್ಯಕ್ಷ ವಾಟಾಳ್ ನಾಗರಾಜ್ ಹೇಳಿದರು. ನಗರದಲ್ಲಿಂದು ರಾಜ್ಯದಲ್ಲಿ ಪರಭಾಷೆ ಚಿತ್ರಗಳ ಬಿಡುಗಡೆ ಬೇಡ ಎಂದು ಪ್ರತಿಭಟನೆ ನಡೆಸಿ ಮಾಧ್ಯಮಗಳೊಂದಿಗೆ ಮಾತನಾಡಿದರು.
ಯಡಿಯೂರಪ್ಪ ಅವರನ್ನು ಬಿಟ್ಟು, ಬಿಜೆಪಿಯವರಿಗೆ ಮುಂದಿನ ಚುನಾವಣೆಯಲ್ಲಿ ಗೆಲ್ಲುವುದಕ್ಕೆ ಆಗೋದಿಲ್ಲ. ಈ ಕಾರಣಕ್ಕಾಗಿ ಹಿಜಾಬ್ ವಿವಾದ, ಮುಸ್ಲಿಂ ವರ್ತಕರಿಗೆ ವ್ಯಾಪಾರ ಬಹಿಷ್ಕಾರ ಮುಂತಾದ ವಿವಾದಗಳನ್ನು ಎಳೆದು ತರುತ್ತಿರುವುದಾಗಿ ಹೇಳಿದ್ದಾರೆ. ಯಡಿಯೂರಪ್ಪರನ್ನು ಬಿಟ್ಟರೆ ಯಾವುದೇ ಕಾರಣಕ್ಕೂ ಕರ್ನಾಟಕದಲ್ಲಿ ಬಿಜೆಪಿ ಗೆಲ್ಲುವುದಿಲ್ಲ ಎಂದು ಹೇಳಿದ್ದಾರೆ.
ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ವಿರುದ್ಧ ಬಿಜೆಪಿ ವಾಗ್ದಾಳಿ ವಿಚಾರವಾಗಿ ಪ್ರತಿಕ್ರಿಯಿಸಿದ ವಾಟಾಳ್ ಅವರು, ಸಿದ್ದರಾಮಯ್ಯ ಒಬ್ಬ ಪ್ರಬುದ್ಧ ರಾಜಕಾರಣಿ. ಸಿದ್ದರಾಮಯ್ಯನವರು ಈಗಾಗಲೇ ವಿವಾದದ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ. ಸ್ಪಷ್ಟನೆ ನೀಡಿದ ಬಳಿಕವೂ ಬಿಜೆಪಿಯವರು ವಿವಾದ ಮಾಡುತ್ತಿರುವುದಾಗಿ ಹೇಳಿದ್ದಾರೆ. ಸಿದ್ದರಾಮಯ್ಯ ಮಠಗಳ ಬಗ್ಗೆ ಗೌರವ ಇರುವ ವ್ಯಕ್ತಿ. ಅವರ ವಿರುದ್ಧ ಷಡ್ಯಂತ್ರ ಮಾಡಲಾಗುತ್ತಿದೆ. ಮಠಾಧಿಪತಿಗಳೂ ಇದನ್ನು ಅರ್ಥ ಮಾಡಿಕೊಳ್ಳಬೇಕು ಎಂದು ಹೇಳಿದರು.
ಚುನಾವಣೆ ಹಿನ್ನೆಲೆ ಬಿಜೆಪಿ ವಿವಾದಗಳನ್ನು ಸೃಷ್ಟಿ ಮಾಡುತ್ತಿರುವುದು : ಚುನಾವಣಾ ಸಮೀಪ ಇರುವ ಹಿನ್ನೆಲೆ ಬಿಜೆಪಿಯವರು ವಿವಿಧ ವಿವಾದಗಳನ್ನು ಸೃಷ್ಟಿಸುತ್ತಿದ್ದಾರೆ. ಮೊದಲು ಹಿಜಾಬ್, ಈಗ ಜಾತ್ರೆಯಲ್ಲಿ ಮುಸ್ಲಿಂ ವರ್ತಕರಿಗೆ ನಿರ್ಬಂಧ ಹೀಗೆ ಹೊಸ ಹೊಸ ವಿವಾದ ತರುತ್ತಿದ್ದಾರೆ. ಮುಸ್ಲಿಮರು ಶತಮಾನಗಳಿಂದ ಇಲ್ಲಿ ಇದ್ದಾರೆ. ಇಲ್ಲೇ ಹುಟ್ಟಿ ವ್ಯಾಪಾರ ಮಾಡುವವರನ್ನು ದೂರ ಮಾಡಬೇಡಿ ಎಂದು ಹೇಳಿದರು. ಟಿಪ್ಪು ಸುಲ್ತಾನ್ ಒಬ್ಬ ಸ್ವಾತಂತ್ರ್ಯ ಹೋರಾಟಗಾರ. ದೇಶಕ್ಕೆ ಆತನ ಕೊಡುಗೆ ಅಪಾರವಾದದ್ದು. ಕೊಲ್ಲೂರು ಸನ್ನಿಧಿಯಲ್ಲಿ ಈಗಲೂ ಟಿಪ್ಪು ಹೆಸರಿನಲ್ಲಿ ಮಂಗಳಾರತಿ ಮಾಡ್ತಾರೆ .ಮಂಗಳಾರತಿ ನಿಲ್ಲಿಸಿ ಇತಿಹಾಸ ತಿರುಚಲು ಸಾಧ್ಯವೇ? ಎಂದು ಪ್ರಶ್ನಿಸಿದರು.
ಕನ್ನಡಿಗರಿಗೆ ಅನ್ಯಾಯ : ಕರ್ನಾಟಕ ಭಾಷಾವಾರು ಪ್ರಾಂತ್ಯ ವಿಚಾರವಾಗಿ ಮಾತನಾಡಿ, ಕರ್ನಾಟಕದಲ್ಲಿ ಕನ್ನಡಿಗರೇ ಅಲ್ಪಸಂಖ್ಯಾತರಾಗುವ ಪರಿಸ್ಥಿತಿ ಎದುರಾಗಿದೆ. ಪರಭಾಷೆಯವರು ಕರ್ನಾಟಕದುದ್ದಕ್ಕೂ ಬರುತ್ತಿದ್ದಾರೆ. ಬೆಂಗಳೂರನ್ನು ಪರಭಾಷಿಕರು ತಿಂದು ನುಂಗಿದ್ದಾರೆ. ಇದಕ್ಕೆ ಕಡಿವಾಣ ಹಾಕದಿದ್ದರೆ ಕನ್ನಡಿಗರು ಗಂಭೀರವಾದ ಸ್ಥಿತಿ ಎದುರಿಸಬೇಕಾಗುತ್ತದೆ ಎಂದು ಆತಂಕ ವ್ಯಕ್ತಪಡಿಸಿದರು.
ಕನ್ನಡಿಗರ ಉದ್ಯೋಗಕ್ಕೆ ಸರ್ಕಾರ ಸ್ಪಷ್ಟ ನೀತಿ ಮಾಡಿಲ್ಲ. ಕನ್ನಡಿಗರಿಗೆ ಉದ್ಯೋಗ ನೀಡುವಲ್ಲಿ ಸರ್ಕಾರ ಪ್ರಾಮಾಣಿಕ ಪ್ರಯತ್ನ ಮಾಡುತ್ತಿಲ್ಲ. ಶಾಸಕರು, ಮಂತ್ರಿಗಳಿಗೆ ಕನ್ನಡದ ಉಳಿವು ಬೇಕಾಗಿಲ್ಲ. ಇದು ಗಂಭೀರವಾದ ಪರಿಸ್ಥಿತಿ. ನಮಗೆ ಹಿಂದಿ ಬೇಡವೇ ಬೇಡ. ಕನ್ನಡ ಚಿತ್ರಗಳನ್ನು ಮೂಲೆಗುಂಪು ಮಾಡಲಾಗುತ್ತಿದೆ. ಪರಿಭಾಷೆಯ ಚಿತ್ರಗಳಿಗೆ ಬಾಗಿಲು ತೆರೆದು ಆಹ್ವಾನ ನೀಡುತ್ತಿದ್ದಾರೆ. ಆದರೆ ಹೊರ ರಾಜ್ಯಗಳಲ್ಲಿ ಕನ್ನಡಕ್ಕೆ ಅವಕಾಶವೇ ಇಲ್ಲದಂತಾಗಿದೆ ಎಂದು ಪ್ರತಿಭಟನೆಯ ಸಂದರ್ಭ ಹೇಳಿದ್ದಾರೆ.
ಓದಿ : ಥಾಯ್ಲೆಂಡ್ ಆಟಗಾರ್ತಿಯನ್ನು ಮಣಿಸಿ, ಸ್ವಿಸ್ ಓಪನ್ ಸಿಂಗಲ್ಸ್ ಟೈಟಲ್ ಗೆದ್ದ ಪಿ.ವಿ. ಸಿಂಧು