ಮೈಸೂರು: ತಂದೆ ಮಾಡಿದ ಸಾಲವನ್ನು ತೀರಿಸುವಂತೆ ಅಪ್ರಾಪ್ತನಿಗೆ ನೋಟಿಸ್ ಜಾರಿ (Bank notice to minor)ಮಾಡಿದ ಬ್ಯಾಂಕ್ ಆಫ್ ಬರೋಡಾದ(Bank of baroda) ಕ್ರಮವನ್ನು ಬಾಲಕನ ಅಜ್ಜಿ ಖಂಡಿಸಿದ್ದಾರೆ. ಅಲ್ಲದೇ ಜಮೀನನ್ನು ಜಪ್ತಿ ಮಾಡುವುದಾಗಿ ಬ್ಯಾಂಕ್ ಅಧಿಕಾರಿಗಳು ಬೆದರಿಕೆ ಹಾಕಿದ್ದಾರೆ ಎಂದು ತಿಳಿಸಿದ್ದಾರೆ.
ಈ ಬಗ್ಗೆ ವಿಡಿಯೋ ಮಾಡಿ ಈಟಿವಿ ಭಾರತ್ ಜೊತೆ ಮಾತನಾಡಿರುವ ಬಾಲಕನ ಅಜ್ಜಿ ಮಡಿಕೇರಿಯ ಮಲ್ಲಿಗೆ, 2019ರಲ್ಲಿ ಬಾಲಕನ ತಂದೆ ಪಿ.ಜಿ.ಜೀವನ್ ಬ್ಯಾಂಕ್ ಆಫ್ ಬರೋಡಾದ ಕರಡಾ ಬ್ರಾಂಚ್ನಲ್ಲಿ ಜಮೀನಿನ ಮೇಲೆ 12 ಲಕ್ಷ ಸಾಲ ಮಾಡಿದ್ದಾರೆ. ಯಾವ ಕಾರಣಕ್ಕೆ ಎಂದು ನಮಗೂ ಸರಿಯಾಗಿ ತಿಳಿದಿಲ್ಲ. ಜೀವನ್ ಸಾವಿನ ನಂತರ ಬ್ಯಾಂಕ್ ಮ್ಯಾನೇಜರ್ ಸಾಲ ತೀರಿಸುವಂತೆ ಅಪ್ರಾಪ್ತ ಮಗನಿಗೆ ಹಾಗೂ ಆತನ ಅಜ್ಜಿಗೆ ನೋಟಿಸ್ ನೀಡಿ ಒತ್ತಡ ಹೇರುತ್ತಿದ್ದಾರೆ.
ಬ್ಯಾಂಕ್ಗೆ ಬರುವಂತೆ ತೊಂದರೆ ನೀಡುತ್ತಿದ್ದಾರೆ. ಅಲ್ಲದೇ ಇರುವ ಜಮೀನು ಮಾರಿ ಸಾಲ ಮರುಪಾವತಿ ಮಾಡಿ, ಇಲ್ಲವಾದರೇ ನಾವೇ ಜಮೀನನ್ನು ಜಪ್ತಿ ಮಾಡುತ್ತೇವೆ ಎಂದು ಬೆದರಿಕೆ ಹಾಕುತ್ತಿದ್ದಾರೆ ಎಂದು ಅಲವತ್ತುಕೊಂಡರು.
ಇದನ್ನೂ ಓದಿ: ತಂದೆ ಮಾಡಿದ್ದ ಸಾಲಕ್ಕೆ ಅಪ್ರಾಪ್ತ ಮಗನಿಗೆ ಬ್ಯಾಂಕ್ ನೋಟಿಸ್: ಪ್ರಕರಣ ದಾಖಲಿಸುವಂತೆ ಮಕ್ಕಳ ಆಯೋಗದ ಸೂಚನೆ
ಬ್ಯಾಂಕ್ ಮ್ಯಾನೇಜರ್ ತಿಂಗಳಿಗೊಮ್ಮೆ ಬದಲಾಗುತ್ತಿರುತ್ತಾರೆ. ಅವರಿಗೆ ಕನ್ನಡವೂ ಬರುವುದಿಲ್ಲ. ಹಿಂದಿ ಹಾಗೂ ತಮಿಳಿನಲ್ಲಿ ವ್ಯವಹರಿಸುತ್ತಾರೆ. ವಕೀಲ ವಿ.ಪಿ.ರಮೇಶ್ ಎಂಬುವವರಿಂದ ಸಾಲ ಮರು ಪಾವತಿ ಮಾಡುವಂತೆ ನೋಟಿಸ್ ಕೊಡುತ್ತಿದ್ದಾರೆ. ಬಾಲಕನಿಗೂ ಒತ್ತಡ ಹೇರುತ್ತಿದ್ದಾರೆ. ಇದರಿಂದ ಬಾಲಕ ನೊಂದುಕೊಂಡಿದ್ದಾನೆ. ಶಾಲೆಗೆ ಹೋಗುವ ಬಾಲಕ ಹೇಗೆ ಸಾಲ ತೀರಿಸುತ್ತಾನೆ ಎಂದು ಅಜ್ಜಿ ಮಲ್ಲಿಗೆ ಪ್ರಶ್ನಿಸಿದ್ದಾರೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಬ್ಯಾಂಕ್ ಮ್ಯಾನೇಜರ್ ವಿರುದ್ಧ ಎಫ್ಐಆರ್ ದಾಖಲಿಸಲು ಕರ್ನಾಟಕ ರಾಜ್ಯ ಮಕ್ಕಳ ರಕ್ಷಣಾ ಆಯೋಗ ಈಗಾಗಲೇ ಸೂಚಿಸಿದೆ.